ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ ಎರಡನೇ ದಿನದ 21ನೇ ಸಂಗೀತೋತ್ಸವದಲ್ಲಿ ಗುರುವಾರ ವಿದ್ವಾನ್ ನಳಿನಿ ಮೋಹನ್, ಹೃಷಿತಾ ಕೇದಗೆ ಅವರು ನಿರಂತರವಾಗಿ ಎರಡು ತಾಸು ನುಡಿಸಿದ ವೈಯಲಿನ್ ವಾದನದ ನೀನಾದ ಸಂಗೀತ ಪ್ರಿಯರನ್ನು ಮಂತ್ರ ಮುಗ್ಧರನ್ನಾಗಿಸಿತು.
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿದ ವಿದ್ವಾನ್ ನಳಿನ ಮೋಹನ್ ಅವರು ತ್ಯಾಗರಾಜರ ರಾಮಭಕ್ತಿ ಸಾಮ್ರಾಜ್ಯ ಕೃತಿಯನ್ನು ಶುದ್ಧ ಬಂಗಾಳ ರಾಗದಿಂದ ಪ್ರಾರಂಭಿಸಿ ನಾದ ಲೋಕಕ್ಕೆ ಮಾರ್ಗ ಕಲ್ಪಿಸಿಕೊಟ್ಟರು. ಪಟ್ನಮ್ ಸುಬ್ರಮಣ್ಯ ಅಯ್ಯರ್ ರಚಿಸಿದ ಪರಿದನ ಮಿಂಚಿತೆ ಕೃತಿಯನ್ನು ಬಿಲಹರಿ ರಾಗದಲ್ಲಿ, ವಿದ್ವಾನ್ ಆರ್.ಕೆ. ಪದ್ಮನಾಭ ರಚಿಸಿದ ಶಾರದೆ ವಿಶಾರದೆ ಕೃತಿಯನ್ನು ಷಣ್ಮುಖಪ್ರಿಯ ರಾಗದಲ್ಲಿ, ಮುತ್ತುಸ್ವಾಮಿ ದೀಕ್ಷಿತರ ಕ್ಷಿತಿಜ ರಮಣ ಕೃತಿಯನ್ನು ದೇವಾಗಾಂದಾರಿ ರಾಗ, ತ್ಯಾಗರಾಜರ ಶೋಬಿಲ್ಲು ಕೃತಿಯನ್ನು ಜಗನ್ಮೋಹನಿ ರಾಗ, ನಗುಮೋಮು ಕೃತಿಯನ್ನು ಅಭೇರಿ ರಾಗ ಹಾಗೂ ತಿಲ್ಲಾನ ಕೃತಿಯನ್ನು ಪೂರ್ವಿ ರಾಗದಲ್ಲಿ ನುಡಿಸಿ ನಾದಸುಧೆ ಹರಿಸಿದರು.
ಯುವ ಕಲಾವಿದೆ ಹೃಷಿತಾ ಕೇದಗೆ ಅವರು ಸಹ ವಾದಕರಾಗಿ ಪಿಟೀಲು ನುಡಿಸಿ ಕಲಾ ವಿದ್ವತ್ ಪ್ರದರ್ಶಿಸಿ ರಂಜಿಸಿದರು. ವಿದ್ವಾನ್ ಎನ್. ವಾಸುದೇವ ಅವರು ಮೃದಂಗ ನುಡಿಸಿ ಜನಮನೆ ಸೂರೆಗೊಂಡರು. ವಿದ್ವಾನ್ ಬಿ. ರಾಜಶೇಖರ್ ಮೋರ್ಚಿಂಗ್ ಪ್ರೇಕ್ಷಕರನ್ನು ಮೋಡಿ ಮಾಡಿತು.
ವಿದ್ವಾನ್ ಆದಿತಿ ಪ್ರಹ್ಲಾದ್ ಗಾಯನಕ್ಕೆ ವಿದ್ವಾನ್ ವೈಭವ್ ರಮಣಿ ಪಿಟೀಲು, ಅನೂರ್ ವಿನೋದ್ ಶ್ಯಾಮ್ ಮೃದಂಗ, ಆರ್. ಕಾರ್ತಿಕ್ ಖಂಜರಿ ನುಡಿಸಿ ಜನಮನ ಗೆದ್ದರು.
ವಿದ್ವಾನ್ ಹೇರಂಬ ಮತ್ತು ವಿದ್ವಾನ್ ಹೇಮಂತ ಅವರು ನುಡಿಸಿದ ಕೊಳಲು ವಾದನ ನಾದಲೋಕವನ್ನೆ ಸೃಷ್ಟಿಸಿತು. ವಿದ್ವಾನ್ ಚಾರುಲತಾ ರಾಮಾನುಜಮ್ ಪಿಟೀಲು, ವಿದ್ವಾನ್ ಎಚ್.ಎಸ್. ಸುದೀಂಧ್ರ ಮೃದಂಗ, ವಿದ್ವಾನ್ ಶರತ್ ಕೌಶಿಕ್ ಘಟ ನುಡಿಸಿ ಕಲಾ ರಸಿಕರ ಮನ ಸೂರೆಗೊಂಡರು.
0 Comments