ಕಲಿಕಾ ಚೇತರಿಕೆ ವರ್ಷಾಚರಣೆ; ವಿದ್ಯಾರ್ಥಿಗಳಿಗೆ ಪೆನ್ ಕೊಡುಗೆ ಕೊಟ್ಟು ಸ್ವಾಗತಿಸಿದ ಅಧ್ಯಕ್ಷ ರಂಗಸ್ವಾಮಿ

ಅರಕಲಗೂಡು:  ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ಮೌಲ್ಯಯುತ ಶಿಕ್ಷಣ ನೀಡುವ ಜತೆಗೆ ಬೌದ್ಧಿಕ ಮಟ್ಟ ಹೆಚ್ಚಿಸಲು ಕಾಳಜಿ ವಹಿಸಬೇಕು ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಲಿಕಾ ಚೇತರಿಕೆ ವರ್ಷಾಚರಣೆ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಿಗೆ ಕ್ಷೀರ, ಬಿಸಿಯೂಟ ಸೇರಿದಂತೆ ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದೆ. ಕರೊನಾ ಕಾರಣಕ್ಕಾಗಿ ಎರಡು ವರ್ಷಗಳಿಂದ ತರಗತಿಗಳು ಸರಿಯಾಗಿ ನಡೆಯದ ಕಾರಣ ಈ ಸಲ ಕಲಿಕಾ ಚೇತರಿಕೆ ವರ್ಷ ಘೋಷಣೆ ಮಾಡಿ ಶೈಕ್ಷಣಿಕವಾಗಿ ಮಕ್ಕಳಿಗೆ ಉಪಯುಕ್ತ ಯೋಜನೆಗಳನ್ನೂ ಅನುಷ್ಠಾನಗೊಳಿಸಿದೆ. ವಿದ್ಯಾರ್ಥಿಗಳು ಸೌಲಭ್ಯಗಳ ಸದುಪಯೋಗ ಪಡೆದು ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಖಾಸಗಿ ಶಾಲೆಗಳಂತೆ‌ ಸರ್ಕಾರಿ ಶಾಲೆಗಳು ಸಹ ಶೈಕ್ಷಣಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿ ಪೋಷಕರನ್ನು ಇಂತಹ ಕಾರ್ಯಕ್ರಮಗಳಿಗೆ ಕರೆಸಿ ಮಕ್ಕಳ ಶಿಕ್ಷಣದ ಬೆಳವಣಿಗೆಯತ್ತ ಹೆಚ್ಚು ಗಮನ ಹರಿಸಬೇಕು ಎಂದರು.
ಕೋವಿಡ್ ಲಾಕ್ ಡೌನ್ ನಿಂದಾಗಿ ಶಾಲೆಗಳು ತರಗತಿಗಳು ನಡೆಯದೆ ಮಕ್ಕಳಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಇನ್ನು ಮುಂದೆ ತರಗತಿಯಲ್ಲಿಯೇ ಕಲಿಕೆಗೆ ಸರ್ಕಾರ ಹೆಚ್ಚು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಹೀಗಾಗಿ ಮೊಬೈಲ್ ಬಳಕೆಯಲ್ಲಿ ಕಾಲಾಹರಣ ಮಾಡದೆ ಕಂಪ್ಯೂಟರ್ ತರಬೇತಿ ಕಲಿತು ಓದಿನತ್ತ ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕ ಶಿವಪ್ರಕಾಶ್ ಮಾತನಾಡಿ, ಮಕ್ಕಳ ಹಾಜರಾತಿ ಹೆಚ್ಚಿಸಲಾಗುತ್ತಿದ್ದು ಹಳೆಯ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಶಾಲೆಗೆ ಹೆಚ್ಷಿನ ಮೂಲ ಸೌಕರ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕೈಜೋಡಿಸಿ ಅಗತ್ಯ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಸದಸ್ಯೆ ಸುಮಿತ್ರಮ್ಮ, ಎಸ್ ಡಿಎಂಸಿ ಸದಸ್ಯರಾದ ಮಹಾದೇವ, ಪ್ರಸನ್ನ, ಚೇತನ, ಕುಶಾಲ್, ಶಿಕ್ಷಕರಾದ ಜಗದೀಶ್ ಹಿರೇಮಠ್, ಅಪ್ಪಾಜಿಗೌಡ, ಮಮತಾ, ಆಶಾ, ಎನ್.ಎಸ್. ಗೋಪಾಲ್ ಇತರರಿದ್ದರು. ಅಧ್ಯಕ್ಷ ರಂಗಸ್ವಾಮಿ ಅವರು ಎಲ್ಲ ಮಕ್ಕಳಿಗೆ ಉಚಿತವಾಗಿ ಪೆನ್ ಗಳನ್ನು ವಿತರಿಸಿದರು.
ಇದಕ್ಕೂ ಮುನ್ನ ಶಾಲಾ ಆವರಣದ ಸುತ್ತ‌ ಸ್ವಚ್ಚತಾ ಕಾರ್ಯ ನಡೆಸಲಾಯಿತು.

Post a Comment

0 Comments