ಅರಕಲಗೂಡು: ಕಾಯಕತ್ವದಲ್ಲಿ ದೈವತ್ವದ ಸೇವೆ ಕೈಗೊಳ್ಳುವ ಮುಖೇನ ಉನ್ನತ ಜ್ಞಾನಿಯಾಗಿ ಭಕ್ತಿ ಮತ್ತು ಧರ್ಮದ ಹಾದಿಯಲ್ಲಿ ಸಾಗಿದರೆ ಭಗವಂತ ಸದಾಕಾಲ ಕಾಪಾಡುತ್ತಾನೆ ಎಂದು ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ತಾಲೂಕಿನ ಮದಲಾಪುರ ಗ್ರಾಮದಲ್ಲಿ ಶ್ರೀ ಬಸಪ್ಪ ಕಲ್ಲೇಶ್ವರಸ್ವಾಮಿ ದೇವರ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಆಯೋಜಿಸಿದ್ದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬದುಕಿನ ಸಾಧನೆಯ ಹಾದಿಯಲ್ಲಿ ಮನುಷ್ಯ ಸಂಪಾದಿಸಿದ ಐಶ್ವಯ ಅಧಿಕಾರ ಅಂತಸ್ತು ಏನೊಂದು ಶಾಶ್ವತವಲ್ಲ. ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸುವ ಮನೋಧರ್ಮ ಬೆಳೆಸಿಕೊಂಡರೆ ಮೋಕ್ಷದ ಫಲ ಪ್ರಾಪ್ತಿಯಾಗಲಿದೆ. ಮುಖ್ಯವಾಗಿ ಸಂಪತ್ತು, ಸಂಬಂಧಿಕರಿಗಿAತ ಒಳ್ಳೆಯ ಸತ್ಕರ್ಮಿಯ ಸ್ನೇಹ ಬೆಳೆಸಿದರೆ ಕಷ್ಟಕಾಲದಲ್ಲಿ ಆಸರೆಯಾಗಲಿದೆ. ಸ್ವಾರ್ಥದ ಜೀವನ ಬದಿಗೊತ್ತಿ ಬೇರೊಬ್ಬರಿಗೆ ಉಪಕಾರಿಯಾಗಿ ಜೀವಿಸುವ ಮಾನವತ್ವದ ಸದ್ಗುಣಗಳನ್ನು ಮೈಗೂಡಿಸಿಕೊಳ್ಳುವುದು ಮನುಕುಲದ ನಿಜವಾದ ಧರ್ಮವಾಗಿದೆ ಎಂದರು.
ಕೆಸವತ್ತೂರು ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಇರುವಷ್ಟು ದಿನ ಪ್ರಾಮಾಣಿಕವಾಗಿ ದುಡಿದು ನೊಂದವರ ಬಾಳಿಗೆ ಬೆಳಕಾಗಬೇಕು. ದುಡಿದ ಒಂದಿಷ್ಟು ಭಾಗವನ್ನು ಬಡವರಿಗೆ ನೀಡಿ ಬದುಕು ಸಾರ್ಥಕ್ಯ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅಸಮಾನತೆಯನ್ನು ತೊಡೆದು ದುಡಿಮೆಯೊಂದಿಗೆ ಧಾರ್ಮಿಕ ಕಾರ್ಯಗಳನ್ನು ನಡೆಸಿದರೆ ಶಾಂತಿ ನೆಲಸುತ್ತದೆ ಎಂದರು.
ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಗುತ್ತಿಗೆದಾರ ಕಳ್ಳಿಮುದ್ದನಹಳ್ಳಿ ಲೋಕೇಶ್, ವೀರಶೈವ ಮಹಾಸಭಾ ಕಾರ್ಯದರ್ಶಿ ರಂಗಾಪುರ ಯೋಗೇಶ್ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಎ.ಸಿ. ದೇವರಾಜೇಗೌಡ, ಮುಖಂಡರಾದ ಎಂ.ಆರ್. ಮಂಜುನಾಥ್, ಲೋಕೇಶ್ ಗೌಡ, ಗ್ರಾಮಸ್ಥರು ಇದ್ದರು.
0 Comments