ಅರಕಲಗೂಡು: ಶಾಸ್ತ್ರೀಯ ಸಂಗೀತ ಪರಂಪರೆಗೆ ಹೆಸರಾದ ತಾಲೂಕಿನ ರುದ್ರಪಟ್ಟಣದಲ್ಲಿ 5 ದಿನಗಳ ಕಾಲ ನಡೆಯುವ 21ನೇ ವಾರ್ಷಿಕ ಸಂಗೀತೋತ್ಸವಕ್ಕೆ ಬುಧವಾರ ವಿದ್ಯುಕ್ತ ಚಾಲನೆ ದೊರೆತಿದ್ದು ವಿವಿಧ ಕಲಾವಿದರು ಸಂಗೀತ ಕಚೇರಿ ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ನಾದಲೋಕದಲ್ಲಿ ತೇಲಿಸಿದರು.
ಆರಂಭದಲ್ಲಿ ವಿದ್ವಾನ್ ರೇಖಾ ಸುದರ್ಶನ್ ಅವರು ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ರಚಿಸಿದ ಯವರಿ ಬೋಧನ ಅಭೋಗಿ ರಾಗದ ವರ್ಣ ಹಾಡಿದರು. ಆದಿತಾಳದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಪೂರ್ವಿ ಕಲ್ಯಾಣಿ ರಾಗದ ಮೀನಾಕ್ಷಿ ಮೇಮುದಂ ದೇಹಿ ಆದಿ ತಾಳದ ಕೃತಿ ಹಾಗೂ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ಧನ್ಯಾನದೇನೋ ಬೃಂದಾವನಿ ಮತ್ತು ನಂಬಿಕೆ ಇರಬೇಕು ಕೃತಿಯನ್ನು ಆನಂದ ಭೈರವಿ ರಾಗದಲ್ಲಿ ಹಾಡಿದರು.
ಬೆಂಗಳೂರಿನ ಆನಂದಿ ನೃತ್ಯ ಶಾಲೆಯ ವಿದುಷಿ ಶ್ವೇತಾ ರಾಘವೇಂದ್ರ ಅವರ ನಿರ್ದೇಶನದಲ್ಲಿ ವಿದುಷಿಯರಾದ ಶುಭಾ ಮಾರ್ಕಂಡೇಯ ಮತ್ತು ಶ್ರೇಯ ಎಸ್. ಆತ್ರೆಯ ಅವರು ಅದ್ಭುತವಾದ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದ್ದು ಪ್ರೇಕ್ಷರ ಮೈನವಿರೇಳಿಸಿತು.
10 ವರ್ಷದ ಬಾಲಕಿ ಸಹನ ಬೆಟ್ಟದಪುರ ನಡೆಸಿಕೊಟ್ಟ ಗಾಯನ ಕಚೇರಿ ಸಂಗೀತಾಭಿಮಾನಗಳ ಮನ ಸೂರೆಗೊಂಡಿತು. ಬೆಹಾಗ್ ವರ್ಣದಲ್ಲಿ ವನಜಾಕ್ಷ, ಮಾಯಮಾಳವ ಗೌಳದಲ್ಲಿ ಮಾಯತೀತ ಸ್ವರೂಪಿಣಿ ಮತ್ತು ಆನಂದ ಭೈರವಿ ರಾಗದಲ್ಲಿ ಪುರಂದರ ದಾಸರು ರಚಿಸಿದ ಸುಮ್ಮನೆ ಬರುವುದೇ ಮುಕುತಿ ಅಚ್ಯುತನ ನೆನೆಯದೇ ಭಕುತಿ ಹಾಡಿಗೆ ಪ್ರೇಕ್ಷಕರು ತಲೆದೂಗಿದರು.
ವಿದ್ವಾನ್ ಕವಿತಾ ಕಾರ್ತಿಕ್ ಅವರು ನಾಟ ರಾಗದಲ್ಲಿ ರೇ ರೇ ಭಜ ಮಾನಸ, ಅಠಾಣ ರಾಗದಲ್ಲಿ ಸಕಲ ಗ್ರಹ ಬಲ, ನಿನ್ನೆ ನಮ್ಮಿತಿನಯ್ಯ ಸಿಂಹೇಂದ್ರ ಮಾಧ್ಯಮ, ಜಾನಕಿ ರಮಣ" ಕೃತಿಗಳನ್ನು ಹಾಡಿ ಜನಮನ ಗೆದ್ದರು. ಕವಿತಾ ಅವರ ಗಾಯನಕ್ಕೆ ತಕ್ಕಂತೆ ಕಾರ್ತಿಕ್ ರಾಜನ್ ಮೃದಂಗ ನುಡಿಸಿದರು.
ಕಲಾವಿದರಾದ ಆರ್.ಕೆ. ಗೀತಾಮಣಿ ನಿರ್ದೇಶನದಲ್ಲಿ ರೋಹಿಣಿ ಶೇಖರ್, ಸುಮಾ ನಾಗೇಶ್, ಕೃಷ್ಣವೇಣಿ, ಲೀಲಾವತಿ, ಶಶಿ ರಾಮಕೃಷ್ಣ, ಶೈಲಜಾ ಸಂತೋಷ್, ವನಿತಾ ಮಂಜುನಾಥ್, ಎಂ. ಕೀರ್ತನಾ, ಸುನಿತಾ ಕೆ ಪ್ರಸಾದ್, ಪನ್ನಗಾ, ರೂಪ ಎಲ್ ಸ್ವಾಮಿ ಅವರು ಸಾಮೂಹಿಕವಾಗಿ ಪ್ರಸ್ತುತ ಪಡಿಸಿದ ಗೀತ ಸಂಗೀತ ವೃಂದದಲ್ಲಿ ಹಿಂದೋಳದ ರಾಗದಲ್ಲಿ ಶರಣು ಬೆಣಕನೆ ಹಾಡಿನಿಂದ ಪ್ರಾರಂಭಿಸಿ ಹಮೀರ್ ಕಲ್ಯಾಣಿಯಲ್ಲಿ ಮಾರುತಿಯೇ ಏಳು ಸೇರಿದಂತೆ ಹಲವು ದೇವರ ನಾಮಗಳನ್ನು ಸುಶ್ರಾವ್ಯವಾಗಿ ಹಾಡಿ ಜನರನ್ನು ರಂಜಿಸಿದರು.
ವಿದ್ವಾನ್ ಆರ್.ಕೆ. ಪದ್ಮನಾಭ ಅವರು ರಚಿಸಿದ ಭಾವಾಲಯದ ಕದವ ತೆರೆಸಿ ತೋರೋ ನಾದಾತ್ಮನಾ ಸತ್ಯ ಸುನಾದದ ಚಿಲಕವ ಸರಿಸಿ ರಾಗ ತಾಳಗಳ ಕೋಟೆಯ ಭೇದಿಸಿ ಕೃತಿ ಕೀರ್ತಿಯ ಅಂಗಳವ ತೋರಿಸಿ ಗೇಯ ಗಾನ ಗರ್ಭಗುಡಿಯಲ್ಲಿರುವ ಅಗೋಚರ ನಾದ ಬ್ರಹ್ಮನ ಅನುಭವಕ್ಕೆ ತಾರೋ ರುದ್ರಪಟ್ಟಣದ ಪದ್ಮನಾಭ ದಾಸರ ಹಾಡಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.
ವಿದ್ವಾನ್ ಆರ್.ಎನ್. ಸಂಪತ್ ಕುಮಾರ್ ಅವರ ಗಾಯನ ಕಚೇರಿಗೆ ವಿದ್ವಾನ್ ಸಿ.ವಿ. ಶೃತಿ ವೈಯಲಿನ್, ವಿದ್ವಾನ್ ಶುಭಂಗ್ ಸಾಮಗ ಮೃದಂಗ ನುಡಿಸಿದರು.
ಮಾಸ್ಟರ್ ಈಶಾನ್ ಗಾಯನಕ್ಕೆ ಎಸ್.ಆರ್. ಕಾರ್ತಿಕೇಯ ವೈಯಲಿನ್, ಕೇಶವ ಭಾರದ್ವಾಜ್ ಮೃದಂಗ ನುಡಿಸಿದರು. ವಿದ್ವಾನ್ ಎ.ಎನ್. ರಘು ಸಿಂಹ ಅವರ ಕೊಳಲು ವಾದನಕ್ಕೆ ಮೈಸೂರು ಕೇಶವ್ ವೈಯಲಿನ್, ಬಿ.ಎಸ್. ಪ್ರಶಾಂತ್ ಮೃದಂಗ, ಶಮಿತ್‌ಗೌಡ ಘಟ ನುಡಿಸಿ ರಾಗ ಸುಧೆ ಹರಿಸಿದರು.
0 Comments