ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾಗುತ್ತೆ! ಡಿಸಿಎಂ ಡಿಕೆಶಿ ಭವಿಷ್ಯ?

ಅರಕಲಗೂಡು: ಅಸ್ತಿತ್ವಕ್ಕಾಗಿ ಹೊಂದಾಣಿಕೆ ನಾಟಕವಾಡುವ ಜೆಡಿಎಸ್ ಬಿಜೆಪಿ ಜತೆ ವಿಲೀನವಾಗುವ ದಿನಗಳು ದೂರವಿಲ್ಲ ಎಂದು ಉಪ ಮುಖ್ಯಂತ್ರಿ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದರು!

ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಮತ ಪ್ರಚಾರ ಮಾಡಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ವೇಳೆ ಪಂಚರತ್ನ ಗ್ಯಾರಂಟಿ ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದ ಜೆಡಿಎಸ್ ಗೆ ಯಾವ ಮುತ್ತು ರತ್ನವೂ ಸಿಗಲಿಲ್ಲ. ರಾಜ್ಯದ ಹಿತಕ್ಕಾಗಿ ಒಂದು ದಿನವೂ ಧ್ವನಿ ಎತ್ತಲಿಲ್ಲ. ಈಗ ಬಿಜೆಪಿ ಜತೆ ಪಾರ್ಟ್ರ್ ಆಗಿದ್ದಾರೆ. ರಾಜ್ಯಕ್ಕೆ ಬಿಜೆಪಿ ಕೊಡುಗೆ ಚೆಂಬು ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ಬದುಕು ಕಟ್ಟಿಕೊಳ್ಳಲು ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಆದರೆ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎನ್ನುತ್ತಿರುವ ಕುಮಾರಣ್ಣನಿಗೆ ತಕ್ಕ ಉತ್ತರ ನೀಡಬೇಕು. 

ಗ್ಯಾರಂಟಿಗಳು ತಾತ್ಕಾಲಿಕ ಚುನಾವಣೆ ಕಳೆದ ನಂತರ ನಿಲ್ಲಿಸುತ್ತಾರೆ ಎಂದು ಬಿಜೆಪಿ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಮಾತ್ರವಲ್ಲದೇ ಮುಂದಿನ ಒಂಬತ್ತು ವರ್ಷವೂ ಕಾಂಗ್ರೆಸ್ ಅಧಿಕಾರದಲ್ಲಿದೆ, ಗ್ಯಾರಂಟಿಗಳನ್ನು ನಿಲ್ಲಿಸುವುದಾಗಿ ಬಿಜೆಪಿ ನಾಯಕರು ಕನಸಿನಲ್ಲೂ ಕಾಣುವುದು ಬೇಡ ಎಂದು ಛೇಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಹಾಸನ ಜಿಲ್ಲೆಗೆ ಬಂದು ಕೆಲಸ ಮಾಡಿದ್ದರೆ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೆವು, ನಮಗೆ ಸಮಯ ಸಿಗಲಿಲ್ಲ. 1999ರಲ್ಲಿ ಪ್ರಧಾನಿಯಾಗಿದ್ದ ದೇವೇಗೌಡರನ್ನು ಜಿ. ಪುಟ್ಟಸ್ವಾಮಿಗೌಡ ಅವರು ಸೋಲಿಸಿದಂತೆ ಅವರ ಮೊಮ್ಮಗನನ್ನು ಶ್ರೇಯಸ್ ಪಟೇಲ್ ಸೋಲಿಸುವುದು ಶತಸಿದ್ದ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಎಂ.ಟಿ. ಕೃಷ್ಣೇಗೌಡ, ಎಚ್.ಪಿ. ಶ್ರೀಧರ್‌ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷö್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಆನಂದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್, ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ, ಮುಖಂಡರಾದ ಡಾ. ದಿನೇಶ್ ಭೈರೇಗೌಡ, ಸಿ.ಡಿ. ದಿವಾಕರ್‌ಗೌಡ, ಜಾವಗಲ್ ಮಂಜುನಾಥ್ ಇತರರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮ ಅವರು ಸೆರಗೊಡ್ಡಿ ತಮ್ಮ ಮಗನ ಪರ ಮತ ಯಾಚಿಸಿದರು. ಸಾವಿರಾರು ಜನಸ್ತೋಮ ಭಾಗವಹಿಸಿದ್ದರು. ಕೃಷ್ಣೇಗೌಡ, ‌ಶ್ರೀಧರ್ ಗೌಡ ಬೆಂಬಲಿಗರಿಂದ ಜೈಕಾರ ಮೊಳಗಿತು.

Post a Comment

0 Comments