ಅರಕಲಗೂಡು: ಲೋಕಸಭಾ ಚುನಾವಣೆಯಲ್ಲಿ ಕೃಷ್ಣೇಗೌಡ ಹಾಗೂ ಶ್ರೀಧರ್‌ಗೌಡ ಅವರು ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಗೆ 30 ಸಾವಿರ ಮತಗಳ ಮುನ್ನಡೆ ಕೊಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅರಕಲಗೂಡು ಕಾಂಗ್ರೆಸ್ ಪರವಾದ ಕ್ಷೇತ್ರ, ನಾನು ಯಾವಾಗ ಬಂದು ಮತ ಕೇಳಿದರೂ ಮನ್ನಣೆ ನೀಡಿದ್ದೀರಿ, ಹಾಗಾಗಿ ಇಲ್ಲಿಯ ಮತದಾರರನ್ನು ಕಂಡರೆ ನನಗೆ ಅಭಿಮಾನ ಗೌರವ ಇದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣೇಗೌಡ ಅವರು 56 ಸಾವಿರ ಹಾಗೂ ಶ್ರೀಧರ್‌ಗೌಡ ಅವರು 36 ಸಾವಿರ ಮತ ಪಡೆದಿದ್ದು ಈಗ ಇಬ್ಬರೂ ಒಟ್ಟಾಗಿರುವುದು ಸ್ವಾಗತಾರ್ಹವಾಗಿದ್ದು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಕೊಡಿಸುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಬೇಕು ಎಂದರು.
ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳುವ ಬಿಜೆಪಿ ಸ್ವತಂತ್ರತ್ಯವಾಗಿ ಸ್ಪರ್ಧಿಸದೆ ಯಾಕೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಸೋಲುವ ಭಯದಿಂದ. ಇಷ್ಟು ವರ್ಷಗಳ ಕಾಲ ಕೋಮುವಾದಿ ಬಿಜೆಪಿ ಎಂದು ವಾಚಾಮಗೋಚರವಾಗಿ ಜರಿಯುತ್ತಿದ್ದ ದೇವೇಗೌಡರು ಈಗ ಅದೇ ಪಕ್ಷದೊಂದಿಗೆ ಮೈತ್ರಿ ಮಾಡುಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದರೆ ದೇಶ ತೊರೆಯುವುದಾಗಿ ಮುಸಲ್ಮಾನನಾಗಿ ಹುಟ್ಟುವುದಾಗಿ ಹೇಳುತ್ತಿದ್ದ ದೇವೇಗೌಡರು ಈಗ ಮೋದಿಗೆ ನನ್ನ ಮೇಲೆ ಪ್ರೀತಿ ಇದೆ ಎಂದು ಬಾಯ್ ಬಾಯ್ ಆಗಿದ್ದಾರೆ. ಕೋಮುವಾದಿ ಪಕ್ಷದೊಂದಿಗೆ ಸೇರಿದ್ದು ಅವರ ಪಕ್ಷದಲ್ಲಿನ ಜಾತ್ಯಾತೀತ ಎಂಬ ಪದವನ್ನು ಮೊದಲು ತೆಗೆದು ಹಾಕಲಿ,
ಸಿದ್ದರಾಮಯ್ಯನ ಗರ್ವಭಂಗ ಇಳಿಸುವುದಾಗಿ ದೇವೇಗೌಡರು ಹೇಳುತ್ತಾರೆ ಅಂತ ಗರ್ವ ನನ್ನಲ್ಲಿದ್ದರೆ ತಾನೆ, ಮತದಾರರ ಆಶೀರ್ವಾದ ನನ್ನ ಮೇಲಿರುವ ತನಕ ಯಾರೂ ಏನೆ ಟೀಕಿಸಿದರೂ ಏನೂ ಮಾಡಲು ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡುತ್ತಿದ್ದರೂ ಆ ಪಕ್ಷದ ಸಂಸದರಾಗಲಿ ಪ್ರಜ್ವಲ್ ರೇವಣ್ಣ ಅವರಾಗಲಿ ಕನ್ನಡಿಗರ ಪರ ಒಮ್ಮೆಯೂ ಧ್ವನಿ ಎತ್ತಲಿಲ್ಲ. ಮೋದಿ ಯಾವ ಒಂದು ಭರವಸೆಯನ್ನೂ ಈಡೇರಿಸಿಲ್ಲ. ರಾಜ್ಯಕ್ಕೆ ಬರಬೇಕಿದ್ದ ತೆರಿಗೆ ಹಣ ನುಂಗಿದ್ದಾರೆ. ಬರಗಾಲದಲ್ಲೂ ಪರಿಹಾರ ಕೊಡದ ಬಿಜೆಪಿ ಈಗ ಯಾವ ನೈತಿಕತೆ ಇಟ್ಟುಕೊಂಡು ರಾಜ್ಯದಲ್ಲಿ ಮತ ಕೇಳುತ್ತಿದೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಮತದಾರರು ಪ್ರಶ್ನಿಸಬೇಕು ಎಂದರು.
ಕೇAದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಿ ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಪಕ್ಷ ಬದ್ದವಾಗಿದೆ ಎಂದರು.
ಉಪ ಮುಖ್ಯಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯದ ಜನರ ಹಿತ ಕಾಯಲು ಬಿಜೆಪಿ ಜೆಡಿಎಸ್ ವಿಫಲವಾಗಿದ್ದು ಕನ್ನಡಿಗರು ಜೆಡಿಎಸ್ ತಿರಸ್ಕರಿಸುವಂತೆ ಗುಡುಗಿದರು.
ಕಾಂಗ್ರೆಸ್ ಮುಖಂಡರಾದ ಎಂ.ಟಿ. ಕೃಷ್ಣೇಗೌಡ, ಎಚ್.ಪಿ. ಶ್ರೀಧರ್‌ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಆನಂದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್, ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ, ಮುಖಂಡರಾದ ಡಾ. ದಿನೇಶ್ ಭೈರೇಗೌಡ, ಸಿ.ಡಿ. ದಿವಾಕರ್‌ಗೌಡ, ಜಾವಗಲ್ ಮಂಜುನಾಥ್ ಇತರರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮ ಅವರು ಸೆರಗೊಡ್ಡಿ ತಮ್ಮ ಮಗನ ಪರ ಮತ ಯಾಚಿಸಿದರು.
0 Comments