ತ್ರೇತಾಯುಗದ ನಂಟಿರುವ ದಕ್ಷಿಣ ಕಾಶಿ ರಾಮನಾಥಪುರ

ರವಿ ಬೆಟ್ಟಸೋಗೆ
ಅರಕಲಗೂಡು: ಪುರಾತನ ಕಾಲದಿಂದಲೂ ಅಯೊಧ್ಯೆಯ ಶ್ರೀರಾಮ ಹಾಗೂ ರಾಮನಾಥಪುರದ ಶ್ರೀರಾಮೇಶ್ವರ ದೇವಾಲಯಕ್ಕೆ ಅವಿನಾಭಾವ ಸಂಬಂಧವಿದೆ. ಇಷ್ಟೇ ಏಕೆ ಶ್ರೀರಾಮ ಬಂದಿದ್ದ ಕಾರಣಕ್ಕಾಗಿ ವಾಸವಾಪುರಿ ವಹ್ನಿಪುರಿ ಊರು ರಾಮನಾಥಪುರ ಹೆಸರಿನಿಂದ ಪವಿತ್ರ ಕ್ಷೇತ್ರವಾಗಿ ಖ್ಯಾತಿ ಸಂಪಾದಿಸಿ ಬೆಳವಣಿಗೆ ಸಾಧಿಸಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ಸೇರಿದ ಒಂದು ಪುಣ್ಯ ಕ್ಷೇತ್ರ ರಾಮನಾಥಪುರ. ಹಾಸನದಿಂದ ದಕ್ಕಿಣಕ್ಕೆ 49ಕಿ.ಮೀ ಹಾಗೂ ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿ ಕಾವೇರಿ ನದಿ ದಡದಲ್ಲಿದ್ದು ಈ ಕ್ಷೇತ್ರವು ದಕ್ಷಿಣಕಾಶಿಯಾಗಿ ಪ್ರಖ್ಯಾತಿಯಾಗಿದೆ.

ತ್ರೇತಾಯುಗದ ರಾಮಾಯಣಕ್ಕೂ ಈ ಕಲಿಯುಗದ ರಾಮನಾಥಪುರಕ್ಕೂ ಬಹಳ ಹತ್ತಿರದ ಸಂಬAಧವಿದೆ. ಲಂಕಾಧಿಪತಿ ರಾವಣನನ್ನು ಲೋಕೋದ್ಧಾಕ್ಕಾಗಿ ಸಂಹರಿಸಿದ ನಂತರ ಶ್ರೀರಾಮ ಅಯೋಧ್ಯೆಗೆ ಮರಳಿದ ಮೇಲೆ ಬ್ರಾಹ್ಮಣನಾದ ರಾವಣನ ಅಸುರ ಪರಿವಾರವನ್ನು ಸಂಹರಿಸಿದ್ದರಿಂದ ಬ್ರಹ್ಮಹತ್ಯಾ ದೋಷಪರಿಹರಿಸಿಕೊಳ್ಳಲು ತೀರ್ಮಾನಿಸುತ್ತಾನೆ. ಅಲ್ಲದೇ ಕುಲಗುರು ವಶಿಷ್ಠರ ಒತ್ತಾಸೆ ಮೇರೆಗೆ ಪುಷ್ಟಕ ವಿಮಾನದಲ್ಲಿ ಪರಿವಾರ ಸಮೇತ ರಾಮನಾಥಪುರ(ವಾಸವಾಪುರಿ)ಕ್ಕೆ ಬಂದು ಅಗಸ್ತ್ಯ ಋಷಿಗಳು ವಹ್ನಿ ಪುಷ್ಕರಣಿ ಸಮೀಪದಲ್ಲಿ ಉದ್ಭವಿಸಿರುವ ಶಿವಲಿಂಗದ ವಿಷಯವನ್ನು ರಾಮನಿಗೆ ತಿಳಿಸಿದಾಗ ಅದನ್ನು ಹುಡುಕಿ ಪುಷ್ಕರಣಿಯಲ್ಲಿರುವ ಉದ್ಭವ ಶಿವಲಿಂಗವನ್ನು ಪೂಜಿಸುತ್ತಾನೆ. ಈ ಮೂಲಕ ದೋಷ ಪರಿಹರಿಸಿಕೊಂಡ ಎಂಬುದು ಇತಿಹಾಸ ತಿಳಿಸುತ್ತದೆ. ವಾಸವಾಪುರಿ ಎಂದು ಕರೆಸಿಕೊಂಡಿದ್ದ ಗ್ರಾಮ ಅಂದಿನಿಂದ ಶ್ರೀರಾಮ ಶಿವಲಿಂಗು ಅರ್ಚಿಸಿದಕ್ಕಾಗಿ ರಾಮನಾಥಪುರ ಎಂದಾಯಿತು ಎನ್ನುತ್ತವೆ ಸ್ಥಳ ಪುರಣ.

ದಕ್ಷಿಣ ಗಂಗೆ ಎಂದು ಪ್ರಸಿದ್ಧಿ ಪಡೆದಿರುವ ಕಾವೇರಿ ನದಿ. ಗಂಗಾ ನದಿಯಲ್ಲಿ ಸ್ನಾನಮಾಡಿ ಕಾಶಿ ರಾಮೇಶ್ವರನ ದರ್ಶನ ಪಡೆದರೆ ಪಾಪನಿವಾರಣೆಯಾಗುತ್ತದೆ ಎಂಬ ನಂಬಿಕೆ ಹೇಗೆ ಉತ್ತರಭಾರತದ ಪ್ರವಾಸಿಗರಿಗೆ ಇದೆಯೋ ಹಾಗೆಯೇ ದಕ್ಷಿಣದ ಕಾವೇರಿ ನದಿಯಲ್ಲಿ ಮಿಂದು ರಾಮೇಶ್ವರನ ದರ್ಶನ ಪಡೆದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯು ದಕ್ಷಿಣ ಪ್ರವಾಸಿಗರಿಗೆ ಇದೆ. ರಾಮೇಶ್ವರ ದೇವಸ್ಥಾನ ಸನ್ನಿಧಿಯ ಈ ಕ್ಷೇತ್ರದ ಕಾವೇರಿ ನದಿಯಲ್ಲಿ ಪವಿತ್ರ ವಹ್ನಿಪುಷ್ಕರಣಿ, ಗಾಯಿತ್ರಿ ಶಿಲೆ, ಗೋಗರ್ಭ, ಮೇನಕಾಶಿಲೆ, ಹನುಮಂತನ ಗೋವು, ಕಪಿಲಾತೀರ್ಥ, ಕುಮಾರಧಾರಾ ತೀರ್ಥಗಳು ಇಲ್ಲಿಗೆ ಬರುವ ಭಕ್ತರ ಪಾಲಿನ ಪುಣ್ಯ ಸ್ಥಳವಾಗಿವೆ.

ಶಂಕರಾಚಾರ್ಯರಿಂದ ಶಾಪಗ್ರಸ್ತನಾಗಿ ಕಲ್ಲಾಗಿ ಹೋದ ಕಾಮುದೇನುವಿಗೆ ತ್ರೇತಾಯುಗದ ಶ್ರೀರಾಮ ಬಂದು ಶಾಮ ವಿಮೋಚನೆ ನೀಡುತ್ತಾನೆ.


ರಾಮೇಶ್ವರ ದೇವಾಲಯ ವೈಶಿಷ್ಟ್ಯ: ಹೊಯ್ಸಳರ ಅರಸ 3ನೆಯ ನರಸಿಂಹನ ಕಾಲ (1235-1292)ದಲ್ಲಿ ಸೋಮದಂಡನಾಯಕ ಶ್ರೀ ರಾಮೇಶ್ವರ ದೇವಾಲಯ ಸ್ಥಾಪಿಸಿದ. ನಕ್ಷತ್ರಾಕಾರದ ಗರ್ಭಗುಡಿ, ಸುಕನಾಸಿ, ಕಲಾಕುಸುರಿಯ 9 ಅಂಕಣ ಹೊಂದಿರುವ ನವರಂಗದ ಮನೋಹರ ಸ್ತಂಭಗಳು, ಹೊಯ್ಸಳ ಶಿಖರದ ಮುಂದೆ ಲಾಂಛನವನ್ನು ನಿರ್ಮಿಸಿದ. ನಂತರ ವಿಜಯನಗರ ಅರಸರ ಕಾಲದಲ್ಲಿ ಪ್ರಥಮ ಗೋಪುರ ಮತ್ತು ಸುತ್ತಲೂ ಭದ್ರವಾದ ರಕ್ಷಣಾ ತಡೆಗೋಡೆ ಮಂಟಪಗಳನ್ನು ಕಟ್ಟಿಸಿದ ಎಂಬುದು ತಿಳಿಯುತ್ತದೆ. ಮತ್ತು ಸ್ಥಳೀಯ ಪಾಳೆಯಗಾರರ ಕಾಲಕ್ಕೆ ಅಭಿವೃದ್ಧಿಗೊಂಡಿತೆAದು ಹೇಳಲಾಗಿದೆ.

ದೇವಾಲಯದ ಒಳ ಭಾಗದಲ್ಲಿ ಮೇಣುಗೋಪಾಲ, ಭೈರವ, ಕೇಶವ, ಸೂರ್ಯ, ಗಣಪತಿ, ಮಹಿಷಮರ್ಧಿನಿ ವಿಗ್ರಹಗಳಿದ್ದು. ದೇವಾಲಯದ ಗರ್ಭಗುಡಿಯ ದಕ್ಷಿಣಕ್ಕೆ ದಕ್ಷಿಣಾಮೂರ್ತಿ, ಉತ್ತರಕ್ಕೆ ಚಂಡಿಕೇಶ್ವರಮೂರ್ತಿ, ಈಶಾನ್ಯಕ್ಕೆ ಈಶ್ಯಾನೇಶ್ವರ ದೇವರ ಮಂಟಪಗಳಿವೆ.ವಿಜಯನಗರದ ಆಳರಸರ ಕಾಲದಲ್ಲಾದ ಪ್ರಾಂಗಣದ ಮಂಟಪ ವಿಶಾಲವಾಗಿದ್ದು. ಮಂಟಪದ ಪೌಳಿ ಅನೇಕ ಚಿತ್ರಕಲಾ ಕೌಶಲ್ಯದಿಂದ ಶಿಲ್ಪಭಿತ್ತಿ ರಂದ್ರಜಾಲವನ್ನು ನೆಯ್ದುಕೊಂಡಿದೆ.
ಆದಿಶಂಕರಾಚಾರ್ಯರು, ಮದ್ವಾಚಾರ್ಯರು, ರಾಮಾನುಜಾಚಾರ್ಯರು ಮತ್ತು ವ್ಯಾಸರಾಜರು ರಾಮನಾಥಪುರಕ್ಕೆ ಭೇಟಿ ನೀಡಿದ್ದಕ್ಕೆ ಕುರುಹುಗಳಿವೆ. ಆದಿಶಂಕರಾಚಾರ್ಯರು ಶ್ರೀರಾಮೇಶ್ವರ ದೇವಾಲಯದಲ್ಲಿ. ಇಂದ್ರಾಕ್ಷಿ ಎದುರಿಗೆ ಗ್ರಹ ಪೀಡಾದಿಗಳಿಗೆ ಮಾರಕವಾದ ತಾಮ್ರದ ಶ್ರೀಚಕ್ರ ಸ್ಥಾಪನೆ ಮಾಡಿದ್ದಾರೆ.

ಶ್ರೀ ಪಟ್ಟಾಬಿರಾಮ ದೇವಾಲಯ
ರಾಮನಾಥಪುರದಲ್ಲಿ ಮತ್ತೊಂದು ಪುರಾತನವಾದ ಶ್ರೀ ಪಟ್ಟಾಭಿರಾಮ ದೇವಾಲಯವಿದೆ. ಈ ದೇವಾಲಯ 15ನೆಯ ಶತಮಾನದಲ್ಲಿ ವಿಜಯನಗರದರಸರ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟು ದ್ರಾವಿಡ ಶೈಲಿಯಲ್ಲಿದೆ. ಈ ದೇವಾಲಯವನ್ನು ಸೌಬರಿ ವಹರ್ಷಿಗಳು ಪ್ರತಿಷ್ಟಾಪಿಸಿದರು. ಶ್ರೀ ಪಟ್ಟಾಭಿರಾಮನ ಮೂರ್ತಿ ಅತಿ ಮನೋಹರವಾಗಿದ್ದು ಇದನ್ನು ಸೀತಾದೇವಿ, ಲಕ್ಷ್ಮಣ, ಭರತ, ಶತೃಘ್ನ ಮತ್ತು ಹನುಮಂತನು ಈ ವಿಗ್ರಹಗಳನ್ನು ಪ್ರತಿಷ್ಟಾಪಿಸಿ ಅರ್ಚಿಸಿದರು. ದೇವಾಲಯದಲ್ಲಿರುವ ಮೂಲ ಮೂರ್ತಿ ಶ್ರೀ ರಾಮ ಕುಳಿತಿದ್ದು ಸೀತಾದೇವಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ಪ್ರತಿಮೆ ಇದೆ. ರಾಮನವಮಿ ಉತ್ಸಮ, ಪವಿತ್ರೋತ್ಸವ ದು ವಿಶೇಷೋತ್ಸಗಳು ಪ್ರತಿವರ್ಷ ವೈಶಾಖ ಶುಕ್ಲಪಕ್ಷದಲ್ಲಿ ದೇವರ ರಥೋತ್ಸವ ನಡೆಯುತ್ತದೆ.

Post a Comment

0 Comments