ಅರಕಲಗೂಡು: ಭಾರತದಲ್ಲಿ ಖಾದ್ಯ ತೈಲದ ಬೇಡಿಕೆಯ ಕೊರತೆ ನೀಗಿಸಲು ತಾಳೆ ಕೃಷಿ ಅವಶ್ಯವಾಗಿದ್ದು ರೈತರು ಈ ಬೆಳೆಯನ್ನು ಅವಲಂಭಿಸಿ ಲಾಭದಾಯಕವಾಗಿ ಪರಿವರ್ತಿಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದಬೇಕು ಎಂದು ಶಾಸಕ ಎ. ಮಂಜು ಸಲಹೆ ನೀಡಿದರು.
ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ, ತಾಳೆ ಬೆಳೆ ಅಭಿವೃದ್ಧಿ ಯೋಜನೆ ಪತಂಜಲಿ ಫುಡ್ ಲಿಮಿಟೆಡ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೆಗಾ ತಾಳೆ ಕೃಷಿ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಖಾದ್ಯ ತೈಲದ ವಾರ್ಷಿಕ ಬೇಡಿಕೆ 236ಲಕ್ಷ ಟನ್‌ಗಳಿದ್ದು,ಪ್ರಸ್ತುತ ಖಾದ್ಯ ತೈಲದ ಉತ್ಪಾದನೆ ಕೇವಲ 70ರಿಂದ 80 ಟನ್ ಉತ್ಪಾದನೆ ಇದೆ. ಉಳಿದ ಖಾದ್ಯ ತೈಲದ ಬೇಡಿಕೆಯನ್ನು ಸರಿದೂಗಿಸಲು ಪ್ರತಿ ವರ್ಷ ಸುಮಾರು 150ಲಕ್ಷಟನ್ ಖಾದ್ಯವನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತಿದ್ದೇವೆ. ಇದರ ಮೌಲ್ಯ 77 ಸಾವಿರ ಕೋಟಿ ರೂಗಳಾಗಿದೆ. ಜತೆಗೆ ದೇಶದ ಜನಸಂಖ್ಯೆಗೆ ಅನುಗುಣವಾಗಿ ಖಾದ್ಯ ತೈಲದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ತಾಳೆ ಬೆಳೆ ಬೇಸಾಯ ಪ್ರಮುಖ ಪಾತ್ರ ವಹಿಸಲಿದೆ. ಜೈವಿಕ ಇಂಧನವಾಗಿಯೂ ಬಳಕೆಯಾಗಲಿದೆ ಎಂದರು.
ರೈತರು ಆರ್ಥಿಕವಾಗಿ ಉನ್ನತಿ ಕಾಣದ ಕಾರಣ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕಲಾಗುತ್ತಿದೆ. ಹೀಗಾಗಿ ಉತ್ತಮ ಆದಾಯ ತರುವ ಕೃಷಿ ಬೆಳೆಗಳನ್ನು ಬೆಳೆಯಬೇಕು. ತಾಳೆ ಬೆಳೆ ಜಮೀನಿನಲ್ಲಿ ಕುರಿ ಸಾಕಾಣಿಕೆ ಕೂಡ ಕೈಗೊಳ್ಳಬಹುದು. ಅಡಿಕೆ ಬೆಳೆಗೆ ಭವಿಷ್ಯ ಇರುವ ಖಚಿತತೆ ಇಲ್ಲ. ತಾಳೆ ಬೆಳೆಗೆ ಉತ್ತಮ ಮಾರುಕಟ್ಟೆ ಇದೆ. ಇತರೆ ಸಾಂಪ್ರದಾಯಿಕ ಎಣ್ಣೆಕಾಳುಗಳಿಗೆ ಹೋಲಿಸಿದಲ್ಲಿ ಪ್ರತಿ ಹೆಕ್ಟೆರ್‌ಗೆ ಅತ್ಯಧಿಕ ಖಾದ್ಯ ತೈಲ ನೀಡುವಂತಹ ಬೆಳೆ ತಾಳೆ ಬೆಳೆಯಾಗಿದೆ. ಪ್ರತಿ ಹೆಕ್ಟೆರ್‌ಗೆ 4ರಿಂದ5 ಟನ್ ಖಾದ್ಯ ತೈಲ ಪಡೆಯಬಹುದಾಗಿದೆ.ಅಲ್ಲದೆ ಪೌಷ್ಠಿಕಾಂಶದ ದೃಷ್ಠಿಯಿಂದಲೂ ಸಹ ತಾಳೆ ಎಣ್ಣೆಯು ವಿಟಮಿನ್ ಎ ಮತ್ತುಇ ಸತ್ವವನ್ನು ಹೇರಳವಾಗಿ ಹೊಂದಿದೆ.ಆದುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರವು ತಾಳೆ ಬೆಳೆ ಬೇಸಾಯ ಪ್ರೋತ್ಸಾಹಿಸುವ ಸಲುವಾಗಿ ರಾಜ್ಯದಲ್ಲಿ 2.6ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ತಾಳೆ ಬೆಳೆಯನ್ನು ಬೆಳೆಯಲು ಆರ್ಥಿಕ ನೆರವು ಸಹ ಒದಗಿಸುತ್ತಿದೆ.ಪ್ರತಿ ಹೆಕ್ಟೆರ್‌ಗೆ 20ಸಾವಿರರೂ ಸಹಾಯಧನ ನೀಡಲಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿದೇಶಕ ರಾಜೇಶ್ ಮಾತನಾಡಿ, ಹೊಸದಾಗಿ ತಾಳೆ ಬೆಳೆ ಕೈಗೊಳ್ಳುವ ಪ್ರದೇಶಕ್ಕೆ 20 ಸಾವಿರ ರೂ ಸಹಾಯಧನ, ಪ್ರತಿವರ್ಷವೂ ತಾಳೆ ತೋಟಗಳಿಗೆ ಹೆಕ್ಟೆರ್‌ಗೆ 5500 ರೂಗಳಂತೆ ಮೂರು ವರ್ಷಗಳಿಗೆ ಸಹಾಯಧನ ದೊರೆಯಲಿದೆ.ಇದಲ್ಲದೆ ಡೀಸೆಲ್ ಪಂಪ್ ಸೆಟ್, ವಿದ್ಯುತ್ ಚಾಲಿತ ಪಂಪ್‌ಸೆಟ್‌ಗೆ 22ಸಾವಿರರೂ ಸಹಾಯಧನ ಸಾಮಾನ್ಯವರ್ಗದವರಿಗೆ,ಪರಿಶಿಷ್ಟ ವರ್ಗದವರಿಗೆ 27ಸಾವಿರರೂ ಸಹಾಯಧನ ದೊರೆಯಲಿದೆ.ಇದಲ್ಲದೇ ನಿರ್ಧಿಷ್ಟ ಯಂತ್ರಗಳ ಖರೀದಿಗೆ,ಎರೆಹುಳು ಘಟಕ ಸ್ಥಾಪನೆ,ನೀರು ಕೋಯ್ಲು ಘಟಕ ನಿರ್ಮಾಣ,ಕೊಳವೆಬಾವಿ ಕೊರೆಯಲು ಹಾಗೂ ತೋಟದಲ್ಲಿ ಅಂತರ ಬೇಸಾಯ ಬೆಳಗೂ ಸಹ ಸಹಾಯಧನ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ತಾಳೆ ಬೆಳೆ ಅಭಿವೃದ್ಧಿ ಯೋಜನೆ ಪತಂಜಲಿ ಫುಡ್ ಲಿಮಿಟೆಡ್ ವ್ಯವಸ್ಥಾಪಕ ಪ್ರಸಾದ್ ಬಾಬು ಬೆಳೆಯ ಉಪಯೋಗ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ರೈತರಿಗೆ ತಾಳೆ ಸಸಿಗಳನ್ನು ವಿತರಣೆ ಮಾಡಲಾಯಿತು. ತಹಸೀಲ್ದಾರ್ ಬಸವರೆಡ್ಡ ರೋಣದ, ಇಒ ಗಿರಿಧರ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್, ಗ್ರಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಲತಾ, ತಾಪಂ ಮಾಜಿ ಸದಸ್ಯ ಮರೀಗೌಡ, ಮುಖಂಡರಾದ ಮಗ್ಗೆ ರಾಜೇಗೌಡ, ಶಾಂತಪ್ರಸಾದ ಅರಸು ಇತರರಿದ್ದರು.
0 Comments