ಅರಕಲಗೂಡು: ಮಾನವ ಜಗತ್ತು ಹಾಗೂ ಸಸ್ಯ ಸಂಕುಲದ ಉನ್ನತಿಗೆ ಮಹತ್ವದ ಕೊಡುಗೆ ನೀಡುವ ನಿಟ್ಟಿನಲ್ಲಿ ಟೈಮ್ಸ್ ಸಮೂಹವು ಹತ್ತು ಸಾವಿರ ಗಿಡಗಳನ್ನು ನೆಟ್ಟು ಪರಿಸರ ಬೆಳೆಸುವ ಸತ್ಕಾರ್ಯ ಕೈಗೊಂಡಿದೆ ಎಂದು ಟೈಮ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಗಂಗಾಧರ್ ತಿಳಿಸಿದರು.
ಪಟ್ಟಣದ ಹಾಸನ ಪದವಿ ಪೂರ್ವ ಕಾಲೇಜನಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಸಸ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿಯಿಂದ ಎಲ್ಲವನ್ನೂ ಪಡೆದಿರುವ ನಾವೆಲ್ಲರೂ ಪ್ರಕೃತಿಗೆ ಪ್ರತಿಯಾಗಿ ಏನನ್ನಾದರೂ ಕೊಡಬೇಕು ಎಂಬ ಉದ್ದೇಶದಿಂದ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತನ್ನ ಸಂಸ್ಥೆಯಲ್ಲಿ ಓದುತ್ತಿರುವ ಐದು ಸಾವಿರ ವಿದ್ಯಾರ್ಥಿಗಳಿಗೆ ತಲಾ ಎರಡು ಸಸಿಗಳನ್ನು ನೀಡಿ ಅದನ್ನು ನೆಟ್ಟು ಪೋಷಿಸಿ ಬೆಳೆಸುವ ಸಂಕಲ್ಪ ಮಾಡಲಾಗಿದೆ ಎಂದರು.
ಪ್ರಾಂಶುಪಾಲ ಪಿ. ನವೀನ್ ಉಲಿವಾಲ ಮಾತನಾಡಿ, ಪರಿಸರ ಉತ್ತಮವಾಗಿದ್ದರೆ ನಮ್ಮೆಲ್ಲರ ಬದುಕು ಹಸಿರಾಗಿರುತ್ತದೆ. ಹತ್ತು ಸಾವಿರ ಸಸಿಗಳನ್ನು ನೆಡುವ ಸಸ್ಯೋತ್ಸವ ಕಾರ್ಯಕ್ರಮವು ನಿಮ್ಮ ನಡಿಗೆ ಹಸಿರು ಬೆಳೆಸುವ ಕಡೆಗೆ ಎಂಬ ಸದುದ್ದೇಶಕ್ಕೆ ಎಲ್ಲರೂ ಕೈ ಜೋಡಿಸುವಂತೆ ತಮ್ಮ ಸಮೂಹ ಸಂಸ್ಥೆಗಳಲ್ಲಿ ಒಂದಾದ ಅರಕಲಗೂಡಿನ ಹಾಸನ ಪದವಿ ಪೂರ್ವ ಕಾಲೇಜಿನ ಸುಮಾರು 500 ವಿದ್ಯಾರ್ಥಿಗಳಿಗೆ ತಲಾ ಎರಡು ಗಿಡಗಳಂತೆ ಸುಮಾರು ಸಾವಿರ ಗಿಡಗಳನ್ನು ವಿತರಿಸಲಾಗುತ್ತಿದೆ. ಪರಿಸರದ ಉಳಿವಿಗೆ ಎಲ್ಲರೈ ಕೈಲಾದ ಸೇವೆ ಮಾಡಬೇಕಾಗಿದೆ. ವಿದ್ಯಾರ್ಥಿಗಳ ಪೋಷಕರು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ್ದಾರೆ ಎಂದು ತಿಳಿಸಿದರು.
0 Comments