ಅರಕಲಗೂಡು: ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಲೌಖಿಕ ವಿದ್ಯೆ ಕೊರತೆ ನೀಗಿಸಲು ಪೂಜ್ಯರ ದರ್ಶನದ ಅಗತ್ಯವಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ತಾಲೂಕಿನ ಬಸವಾಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಏರ್ಪಡಿಸಿದ್ದ ಎಡೆಯೂರು ಶ್ರೀ ತೋಂಟದ ಸಿದ್ದಲಿಂಗೇಶ್ವರರ ಪುಣ್ಯ ಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಹುಮುಖ್ಯವಾಗಿ ಇಂದಿನ ಸಮಾಜದಲ್ಲಿ ಲೌಖಿಕ ವಿದ್ಯೆ ಕೊರತೆ ಕಾಡುತ್ತಿದೆ. ಗುರುಗಳು, ಪೂಜ್ಯರ ದರ್ಶನ ಭಾಗ್ಯ ದೊರೆತು ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಧಾರ್ಮಿಕವಾಗಿ ಸತ್ಕಾರ್ಯಗಳನ್ನು ನಡೆಸಿ ಮನುಕುಲದ ಒಳಿತಿಗೆ ಉತ್ತಮ ಸಂದೇಶಗಳನ್ನು ನೀಡಿ ಬದುಕಿನಲ್ಲಿ ಸಾರ್ಥಕ್ಯ ಕಂಡುಕೊಳ್ಳಬಹುದು ಎಂದರು.
ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಆಶೀರ್ವಚನ ನೀಡಿ, ಹದಿನೈದನೆ ಶತಮಾನದ ಅಭಿನವ ಅಲ್ಲಮಪ್ರಭು ಎನಿಸಿದ ಲಿಂಗವಚಿತ ಧರ್ಮ ಪುನರ್ ಪ್ರತಿಷ್ಠಾಪನಾಚಾರ್ಯ ಶಿವಯೋಗ ಸಾರ್ವಭೌಮ ಚರಕುಲ ಚಕ್ರವರ್ತಿ ಎಡೆಯೂರ ಶ್ರೀ ತೋಂಟದ ಸಿದ್ದಲಿಂಗೇಶ್ವರರ ದಿವ್ಯ ರಥೋತ್ಸವ ಪ್ರಯುಕ್ತ ಇವರ ಪುಣ್ಯ ಸಂಸ್ಮರಣೋತ್ಸವ ಆಚರಿಸಲಾಗುತ್ತಿದೆ. ಭಕ್ತರಿಗೆ ಇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹರಸಿದರು.
ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಚಿಲುಮೆ ವ್ಮಠದ ಶ್ರೀ ಜಯದೇವ ಸ್ವಾಮೀಜಿ, ಶ್ರೀ ಮಹಾಂತೇಶ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಶ್ರೀ ನಿರಂಜನ ಸ್ವಾಮೀಜಿ, ಸಮಾಜ ಸೇವಕ ರಮೇಶ್ ಕುಮಾರ್, ವೀರಶೈವ ಮುಖಂಡ ಬಿ.ಎನ್. ವಾಗೀಶ್, ಲಿಖಿತ್, ಗ್ರಾಪಂ ಅಧ್ಯಕ್ಷೆ ಅನುಷಾ ಯೋಗೇಶ್ ಉಪಸ್ಥಿತರಿದ್ದರು.
ಮಠದ ಆವರಣದಲ್ಲಿ ನಿರ್ಮಿಸಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಹೈಮಾಸ್ಕ್ ದೀಪವನ್ನು ಶಾಸಕರು ಉದ್ಘಾಟಿಸಿದರು.
0 Comments