ಅರಕಲಗೂಡು: ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹೊಸ ಕಟ್ಟಡಗಳ ಉದ್ಘಾಟನಾ ಸಮಾರಂಭದ ವೇಳೆ ಶಾಲೆಯ ಶೌಗೃಹದ ದುಸ್ಥಿತಿ ಸರಿಪಡಿಸುವಂತೆ ಕೆಆರ್ ಎಸ್ ಪಕ್ಷದ ಕಾರ್ಯಕರ್ತ ಶಾಸಕ ಎ.ಟಿ. ರಾಮಸ್ವಾಮಿ ಅವರನ್ನು ಪ್ರಶ್ನಿಸಿ ಒತ್ತಾಯಿಸಿದ ಪ್ರಸಂಗ ಜರುಗಿತು.
ಗ್ರಾಮದಲ್ಲಿ ಶಾಲಾ ಕಟ್ಟಡಗಳ ಉದ್ಘಾಟನೆಗೆ ತೆರಳಿದ ಶಾಸಕರು ಸಮಾರಂಭ ಉದ್ಘಾಟಿಸುವ ವೇಳೆ ಮಧ್ಯಪ್ರವೇಶಿಸಿದ ಕೆಆರ್ ಎಸ್ ಪಕ್ಷದ ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಶಾಲೆಯಲ್ಲಿ ಶೌಚಹೃಗಳು ಸರಿಯಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸಮಸ್ಯೆಗಳನ್ನು ಕುರಿತು ಪ್ರಶ್ನಿಸಿದರೆ ಮಧುರನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಗಲಾಟೆಗೆ ಮುಂದಾಗುತ್ತಾರೆ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರದ ಕೋಟಿಗಟ್ಟಲೆ ಅನುದಾನ ವ್ಯಯಿಸಲಾಗುತ್ತಿದೆ. ಇಲ್ಲಿಯ ಶೌಚಗೃಹಗಳ ದುಸ್ಥಿತಿಯನ್ನು ಶಾಸಕರು ಖುದ್ದು ವೀಕ್ಷಿಸಬೇಕು. ಹೊಸ ಕಟ್ಟಡಗಳನ್ನು ಉದ್ಘಾಟಿಸುವ ಮುನ್ನ ಶಾಲೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಶೌಚಗೃಹದ ಸಮಸ್ಯೆ ಬಗೆಹರಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸಮಾಧಾನ ಪಡಿಸಿ ಶಾಸಕರು ಸಮಾರಂಭ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
0 Comments