ಅರಕಲಗೂಡು: ಸ್ವಾತಂತ್ರ್ಯ ನಂತರ ಇಂದಿನತನಕ ಅರಕಲಗೂಡು ತಾಲೂಕಿನ ಅಭಿವೃದ್ಧಿ ಕಾಣಬೇಕೆಂದರೆ ರಾಮನಾಥಪುರ- ಕೇರಳಾಪುರ ಮಾರ್ಗದ ರಸ್ತೆಯಲ್ಲಿ ಓಡಾಡಬೇಕು, ಈ ರಸ್ತೆ ದುಸ್ಥಿತಿ ಕಥೆ ಇಂದು ನೆನ್ನೆಯದಲ್ಲ, ಅದೆಷ್ಟೋ ವರ್ಷಗಳಿಂದ ಸಾವು ನೋವಿನ ಹೆದ್ದಾರಿಯಾಗಿದೆ. ಸೊಂಟ ನೋವು ಆರೋಗ್ಯ ಸಮಸ್ಯೆ ತಂದುಕೊಂಡ ಜನರು ಮಾತ್ರ ಮೂಕರಾಗಿ ಸಂಚರಿಸುವುದು ಇವತ್ತಿಗೂ ತಪ್ಪಿಲ್ಲ. ಇದೀಗ ಮಳೆಗೆ ಗುಂಡಿ ಹೊಂಡಗಳು ರಣಕೇಕೆ ಹಾಕುತ್ತಿವೆ.
ಹೌದು ಎನ್ನುತ್ತವೆ ನಿತ್ಯ ಅಗಲವಾಗುತ್ತಿರುವ ಗುಂಡಿಗಳು ತಾಲೂಕು ಅಭಿವೃದ್ಧಿ ಕಾರ್ಯಗಳಿಂದ ವಂಚಿತವಾಗಿದೆ ಎಂಬುದಕ್ಕೆ ಹಲವು ದಶಕಗಳಿಂದ ರಾಮನಾಥಪುರ- ಕೇರಳಾಪುರ ಮಾರ್ಗದ ರಸ್ತೆ ಹದಗೆಟ್ಟು ಪ್ರಯಾಣಿಕರು ಅನುಭವಿಸುತ್ತಿರುವ ನರಕ ಯಾತನೆ ಮೂಕಸಾಕ್ಷಿ!.
ಪ್ರಮುಖ ಸಂಚಾರಿ ಮಾರ್ಗವಾದ ರಾಮನಾಥಪುರ- ಕೇರಳಾಪುರ ರಸ್ತೆ ಸಂಪೂರ್ಣ ಹಾಳಾಗಿ ಹೋಗಿ ಅದೆಷ್ಟೋ ವರ್ಷಗಳು ಕಳೆದಿದೆ. ಹದಗೆಟ್ಟ ರಸ್ತೆ ದುಸ್ಥಿತಿ ಕಂಡು ಜನಪ್ರತಿನಿಧಿಗಳು ಅದು ಹೇಗೆ ಸುಮ್ಮನಿದ್ದಾರೆ ಎಂಬುದು ಜನತೆಗೆ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
ಈ ಮಾರ್ಗದಲ್ಲಿ ರಾಮನಾಥಪುರ, ಬಸವಾಪಟ್ಟಣ ಮತ್ತು ಕೇರಳಾಪುರ ಗ್ರಾಮಗಳು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ. ಬೆಂಗಳೂರು, ಮೈಸೂರು, ಸಾಲಿಗ್ರಾಮ, ಕೆ.ಆರ್.ಪೇಟೆ ಮಾರ್ಗವಾಗಿ ನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ.
ಕೊಣನೂರು- ರಾನಮನಾಥಪುರ ಹೋಬಳಿ ಭಾಗದ ಜನರು ಮೈಸೂರು ಕಡೆಗೆ ತೆರಳಲು ಇಂದೊAದೆ ಪ್ರಮುಖ ಮಾರ್ಗವಾಗಿದ್ದು ಬೇರೆ ದಾರಿಯಿಲ್ಲದೆ ಪ್ರತಿನಿತ್ಯ ಸಂಚರಿಸುತ್ತಾ ನರಕದ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇದೀಗ ಮಳೆಗಾಲ ಆರಂಭವಾಗಿದ್ದು ಕಳೆದ ಕೆಲ ವಾರಗಳಿಂದ ಅಬ್ಬರಿಸುತ್ತಿರುವ ಸೋನೆಗೆ ಗುಂಡಿಗಳು ಬಾಯ್ತೆರೆದು ರಣಕೇಕೆ ಹಾಕುತ್ತಿವೆ. ಹೊಂಡಗಳು ತುಂಬಿದ್ದು ವಾಹನ ಸವಾರರಿಗೆ ಕೆಸರಿನ ಅಭಿಷೇಕವಾಗುತ್ತಿದೆ. ಆಳುವವರಿಗೆ ಹಿಡಿಶಾಪ ಹಾಕುತ್ತಾ ಗುಂಡಿ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರ ಗೋಳು ಕೇಳುವವರೇ ಇಲ್ಲವಾಗಿದ್ದಾರೆ.
ಇದು ಒಂದೆರಡು ದಿನದ ಪ್ರಯಾಣಿಕರ ಸಂಕಟವಲ್ಲ. ರಸ್ತೆ ದುಸ್ಥಿತಿಯ ಕಥೆಗೆ ಸುಮಾರು ಮರ‍್ನಾಲ್ಕು ದಶಕಗಳೇ ಸಂದಿದೆ. ರಾಮನಾಥಪುರದಿಂದ ಕೇರಳಾಪುರದ ವರೆಗಿನ 12 ಕಿ.ಮೀ. ಉದ್ದದ ರಸ್ತೆಗೆ ಪೂರ್ಣಪ್ರಮಾಣದಲ್ಲಿ ಡಾಂಬರು ಹಾಕಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಇಲ್ಲಿನ ಜನಪ್ರತಿನಿಧಿಗಳು ಮನಸ್ಸು ಮಾಡಿಲ್ಲ. ಕನಿಷ್ಠ ರಾಮನಾಥಪುರದ ಐಬಿ ವೃತ್ತದಿಂದ ಪಿರಿಯಾಪಟ್ಟಣ ಮಾರ್ಗ ಕೂಡುವ ಅರ್ಧ ಕಿ.ಮೀ. ದೂರದ ಕಾವೇರಿ ನದಿ ದೊಡ್ಡ ಸೇತುವೆ ವರೆಗೆ ಡಾಂಬರು ಪೂರ್ತಿ ಕಿತ್ತು ಹೆಜ್ಜೆಗೊಂದು ಗುಂಡಿಗಳು ಬಿದ್ದು ವಾಹನ ಸವಾರರ ಮುಂದೆ ಚಲಿಸಲು ಏದುಸಿರು ಬಿಡುವ ಸ್ಥಿತಿ ನಿರ್ಮಾಣವಾಗಿದೆ.
ರಾಮನಾಥಪುರದಿಂದ ಮುಂದೆ ಶಿರದನಹಳ್ಳಿ, ಮೂಲೇಹೊಸಹಳ್ಳಿ, ಬಸವಾಪಟ್ಟಣ, ದೊಡ್ಡಕೊಪ್ಪಲು, ಕಾಳೇನಹಳ್ಳಿ, ಹೊನ್ನೇನಹಳ್ಳಿ, ಕೇರಳಾಪುರ ತನಕ ಕಿಷ್ಕಿಂದೆಯಂತಿದ್ದು ಗುಂಡಿ ರಸ್ತೆಯಲ್ಲಿ ಪ್ರಯಾಣಿಕರು ಜೀವ ಭಯದಲ್ಲೇ ಸಂಚರಿಸುತ್ತಿದ್ದಾರೆ. ಅಲ್ಲಲ್ಲಿ ಆಳವಾದ ಗುಂಡಿಗಳಲ್ಲಿ ಮಳೆಯ ಕೆಸರು ಮಡುಗಟ್ಟಿದೆ. ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆ ಮುಂಭಾಗ ಬಸ್ ತಂಗುದಾಣ ಆವರಿಸಿರುವ ರಸ್ತೆ ಬದಿ ಕೆಸರಿನ ರಾಡಿ ಅಸಹ್ಯ ಹುಟ್ಟಿಸುತ್ತದೆ. ವಿವಿಧ ಸಂಘಟನೆಗಳ ಮುಖಂಡರು ಸಾಕಷ್ಟು ಸಲ ಪ್ರತಿಭಟನೆ ನಡೆಸಿದರೂ ರಸ್ತೆ ಅಭಿವೃದ್ಧಿ ಇದುವರೆಗೂ ಮರೀಚಿಕೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪಾದಕ - ರವಿ
0 Comments