ಅರಕಲಗೂಡು: ಮನೆ ಮನೆಗೆ ಶುದ್ಧ ಕುಡಿಯುವ ನೀರು ಸಿಗಬೇಕಿದೆ. ಇದು ಬರಿ ಬಾಯಿ ಮಾತಿನಲ್ಲಿ ಆಡಿದರೆ ಸಾಲದು, ಇದಕ್ಕಾಗಿ ಅರಕಲಗೂಡು ವಿಧಾನಸಭಾ ವ್ಯಾಪ್ತಿಯ ಹಳ್ಳಿಮೈಸೂರು ಹೋಬಳಿಯ 74 ಗ್ರಾಮಗಳು ಸೇರಿದಂತೆ ತಾಲೂಕಿನ ಒಟ್ಟು 485 ಗ್ರಾಮಗಳಿಗೆ ಜಲ್ ಜೀವನ್ ಮಿಷನ್ ಯೋಜನೆಯಡಿ 347.84 ಕೋಟಿ ರೂ. ವೆಚ್ಚದಲ್ಲಿ ಮನೆ-ಮನೆಗೆ ಗಂಗೆ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಪ್ರಧಾನಿ ಮೋದಿ ಅವರು ರಾಜ್ಯ ಸರ್ಕಾರದ ಮೂಲಕ ತಾಲೂಕಿಗೆ ಹಣ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಹೆಚ್. ಯೋಗರಮೇಶ್ ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದ್ದು, ಇದಕ್ಕೆ ರಾಜ್ಯಸರ್ಕಾರವೂ ಅನುಮತಿ ನೀಡಿದೆ. ಈಗಾಗಲೇ ಆರ್ಥಿಕ ಇಲಾಖೆಯಿಂದಲೂ ಅನುಮೋದನೆ ದೊರೆತಿದ್ದು, ಇದರ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಸಹಕಾರ ನೀಡಿದ್ದಾರೆ ಎಂದು ಸುದ್ಹಿಗೋಷ್ಠಿಯಲ್ಲಿ ಹೇಳಿದರು.
ಈ ಯೋಜನೆಗೆ ಕೇಂದ್ರ ಸರ್ಕಾರ ಶೇ. 42.5 ರಷ್ಟು ಹಣ ನೀಡಲಿದ್ದು, ರಾಜ್ಯ ಸರ್ಕಾರ ಶೇ.42.5, ಯೋಜನೆ ಫಲಾನುಭವಿಗಳಿಂದ ಶೇ.10 ಹಾಗೂ 15ನೇ ಹಣಕಾಸು ಆಯೋಗದಿಂದ ಶೇ.5ರಷ್ಟು ಹಣ ಪಡೆದುಕೊಳ್ಳಲಾಗುತ್ತಿದೆ ಎಂದರು.
ತಾಲೂಕಿನ ಕೊಣನೂರು ಹೋಬಳಿಯ ಬಾನಗೂಂದಿ, ರಾಮನಾಥಪುರ ಹೋಬಳಿಯ ಆನಂದೂರು ಮತ್ತು ಕಸಬಾ ಹೋಬಳಿಯ ಬೋಳಕ್ಯಾತನಹಳ್ಳಿ ನದಿ ಪಾತ್ರಗಳಿಂದ ನೀರನ್ನು ಒದಗಿಸಲಾಗುತ್ತಿದೆ. ಕಾವೇರಿ ನದಿ ಪಾತ್ರದ ಬಾನಗೂದಿಯಿಂದ 187.81 ಕೋಟಿ ರೂ. ವೆಚ್ಚದಲ್ಲಿ 260 ವಸತಿ ಗ್ರಾಮಗಳ 32,686 ಮನೆಗಳು, ಆನಂದೂರಿನಿಂದ 80,03 ಕೋಟಿ ರೂ. ವೆಚ್ಚದಲ್ಲಿ 85 ಗ್ರಾಮಗಳ 14,138 ಮನೆಗಳು ಹಾಗೂ ಹೇಮಾವತಿ ನದಿ ಪಾತ್ರದ ಬೋಳಕ್ಯಾತನಹಳ್ಳಿಯಿಂದ 80 ಕೋಟಿ ರೂ.ವೆಚ್ಚದಲ್ಲಿ 138 ಗ್ರಾಮಗಳ 12,728 ಮನೆಗಳು ಒಟ್ಟು 58 ಸಾವಿರ ಮನೆಗಳಿಗೆ ಶುದ್ದ ಕುಡಿಯುವ ನೀರು ಸಿಗಲಿದೆ. ಇದಕ್ಕೆ ಸರ್ಕಾರ ಅನುಮತಿ ನೀಡಿದ್ದು, ಕ್ರೀಯಾಯೋಜನೆ ಆಗುತ್ತಿದೆ. ಈ ಎಲ್ಲಾ ಕಾಮಗಾರಿಗಳಿಗೆ ಸಧ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಹೇಳಿದರು.
348 ಕೋಟಿ ರೂ. ವೆಚ್ಚದ ಹೇಮಾವತಿ ಬಲದಂಡೆ ನಾಲೆ ಆಧುನಿಕ ಕಾಮಗಾರಿ, 380 ಕೋಟಿ ರೂ.ವೆಚ್ಚದ ಹೇಮಾವತಿ ಬಲಮೇಲ್ದಂಡೆ ಕಾಮಗಾರಿ ಪೂರ್ಣಗೊಂಡಿದೆ. ಹಾಗೆಯೇ ತಾಲೂಕಿನ ಕಸಬಾ, ಮಲ್ಲಿಪಟ್ಟಣ, ಕೊಣನೂರು ಹೋಬಳಿ ಹಾಗೂ ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳ 225 ಕೆರೆಗಳಿಗೆ ನೀರು ತುಂಬಿಸುವ 190 ಕೋಟಿ ರೂ ವೆಚ್ಚದ ಮಲ್ಲಿಪಟ್ಟಣ ಏತನೀರಾವರಿ ಯೋಜನೆ ಕಾಮಗಾರಿ ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ. ಜತೆಗೆ 15 ಎಕರೆ ಪ್ರದೇಶದಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಶು ಆಹಾರ ಘಟಕ ಕಾಮಗಾರಿ ಪೂರ್ಣಗೊಂಡಿದೆ ಎಂದು ವಿವರಿಸಿದರು.
ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್ ಆಡಳಿತದಲ್ಲಿದ್ದು, ಉಸ್ತುವಾರಿ ಮಂತ್ರಿಗಳಿದ್ದರೂ ಯೋಜನೆಗಳೆಲ್ಲವೂ ಹೊಳೇನರಸೀಪುರಕ್ಕೆ ಸೀಮಿತವಾಗುತ್ತಿತ್ತು. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆಧಿಕಾರಕ್ಕೆ ಬಂದ ಮೇಲೆ ಯಾವುದೇ ಪಕ್ಷಪಾತವಿಲ್ಲದೆ ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಜನರ ಹಿತದೃಷ್ಠಿಯಿಂದ ಈ ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗಾಗಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಪಕ್ಷವನ್ನು ಬಲಪಡಿಸಬೇಕಿದೆ ಎಂದರು.
ಜಿಜೆಪಿ ಅರಕಲಗೂಡು ಮಂಡಲದ ಅಧ್ಯಕ್ಷ ವಿಶ್ವನಾಥ್, ವಿಜಯಕುಮಾರ್, ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮತ್ತಿತರಿದ್ದರು.
0 Comments