ಅರಕಲಗೂಡು: ರೈತರ ಜೀವನದ ಜತೆ ಚೆಲ್ಲಾಟ ಒಳಿತಲ್ಲ, ತಾಲೂಕಿನಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡು ಜಾನುವಾರುಗಳ ಸರಣಿ ಸಾವು ಸಂಭವಿಸುತ್ತಿದ್ದರೂ ಸೂಕ್ತ ಲಸಿಕೆ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸದೆ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್. ಯೋಗಾ ರಮೇಶ್ ಅಪಾದಿಸಿದರು.
ಪಟ್ಟಣದ ಪಶುಸಂಗೋಪನೆ ಮತ್ತು ಪಶು ಪಾಲನಾ ಆಸ್ಪತ್ರೆ ಮುಂಭಾಗ ಪೊಟ್ಯಾಟೋ ಕ್ಲಬ್ ನೇತೃತ್ವದಲ್ಲಿ ಜಾನುವಾರುಗಳ ಸಾವು ಖಂಡಿಸಿ ಶುಕ್ರವಾರ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾರಸನಹಳ್ಳಿ ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ತಗುಲಿ ಹಲವಾರು ಮೃತಪಟ್ಟಿವೆ. ರೋಗ ಉಲ್ಭಣಿಸಿದ ವೇಳೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯುವ ಉದ್ದೇಶದಿಂದ ಪಾರಸನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ.
ಜನಪ್ರತಿನಿಧಿಗಳು ನಿರ್ಲಕ್ಷö್ಯ ಧೋರಣೆಯಿಂದಾಗಿ ರೋಗದ ತೀವ್ರತೆ ಹೆಚ್ಚಿ ಗಬ್ಬದ ಹಸು, ಕರುಗಳು ನರಳಿ ನರಳಿ ಪ್ರಾಣ ಕಳೆದುಕೊಳ್ಳುತ್ತಿವೆ. ಲಸಿಕೆ ನೀಡಿ ಜಾನುವಾರುಗಳ ಜೀವ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಕಾಲು ಬಾಯಿ ರೋಗ ಜಾನುವಾರುಗಳಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ಸ್ಕಿನ್ ಕಾಯಿಲೆ ಕೂಡ ಉಲ್ಭಣಿಸಿದೆ. ಇದಕ್ಕೆ ಔಷಧಿಯೇ ಇಲ್ಲವಂತೆ, ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇತರೆ ವಿಚಾರಗಳ ಕುರಿತು ಚರ್ಚೆ ಮಾಡುವ ಶಾಸಕರು, ಸಚಿವರು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಮೂಕರಾಗಿದ್ದಾರೆ. ಕೂಡಲೇ ಮೃತಪಟ್ಟ ಜಾನುವಾರುಗಳ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕು. ಹಳ್ಳಿಗಳಲ್ಲಿ ಸಾಮೂಹಿಕ ಲಸಿಕೆ ಕೈಗೊಂಡು ರೋಗ ನಿಯಂತ್ರಿಸಬೇಕು. ಪಶು ವೈದ್ಯರ ಕೊರತೆ ನೀಗಿಸಿ ಜಾನುವಾರುಗಳಿಗೆ ಗುಣಮಟ್ಟದ ಚಿಕಿತ್ಸಾತ್ಮಕ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹೈನುಗಾರಿಕೆಯನ್ನೆ ನೆಚ್ಚಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಇತ್ತ ಶುಂಠಿ, ಆಲೂಗಡ್ಡೆ ಕಟಾವು ನಡೆಸಿ ಮಾರಾಟ ಮಾಡಿದರೂ ಬೆಲೆ ಕುಸಿದು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದೇವೆ, ಅತ್ತ ಮನೆ ಕೊಟ್ಟಿಗೆಯಲ್ಲಿ 50ರಿಂದ 60 ಸಾವಿರ ರೂ ಬೆಲೆ ಬಾಳುವ ಹಸುಗಳು ದಿನನಿತ್ಯ ರೋಗಬಾಧೆ ತಾಳಲಾರದೆ ಒದ್ದಾಡಿ ಸಾಯುತ್ತಿವೆ. ನಾವು ಬದುಕು ಸಾಗಿಸುವುದಾದರೂ ಹೇಗೆ ಎಂದು ಕಂಚೇನಹಳ್ಳಿ, ಪಾರಸನಹಳ್ಳಿ ಭಾಗದ ಪ್ರತಿಭಟನಾನಿರತ ರೈತರು ಆಕ್ರೋಶ ಹೊರಹಾಕಿದರು.
ಪಶುಸಂಗೋಪನಾ ಮತ್ತು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ದಿಲೀಪ್ ಮನವಿ ಸ್ವೀಕರಿಸಿ ಮಾತನಾಡಿ, ಪಾರಸನಹಳ್ಳಿ ಗ್ರಾಮದಲ್ಲಿ ಪಶು ವೈದ್ಯರನ್ನು ನಿಯೋಜಿಸಲಾಗಿದೆ. ರೋಗದಿಂದ ಮೃತಪಡುತ್ತಿರುವ ಜಾನುವಾರುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಪೊಟ್ಯಾಟೋ ಕ್ಲಬ್ ಮುಖಂಡರಾದ ಶಿವಲಿಂಗಶಾಸ್ತಿç, ಚಂದೇಗೌಡ, ನಳಿನಿ, ಎಸ್‌ಟಿಡಿ ರಾಮಣ್ಣ, ಲೋಕೇಶ್ ಮುಂತಾದವರು ಪಾಲ್ಗೊಂಡಿದ್ದರು.
0 Comments