SSLC ಫಲಿತಾಂಶ 5ನೇ ಸ್ಥಾನಕ್ಕೆ ಜಿಗಿದ ಅರಕಲಗೂಡು; ಶೇ. 82.54 ಫಲಿತಾಂಶ

ಅರಕಲಗೂಡು: ತಾಲೂಕಿಗೆ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 82.54 ಫಲಿತಾಂಶ ದೊರೆತಿದೆ.

ಹಾಸನ ಜಿಲ್ಲೆಯಲ್ಲಿ ಅರಕಲಗೂಡು ತಾಲೂಕು ಕಳೆದ ಬಾರಿಯ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಬಾರಿ ಐದನೇ ಸ್ಥಾನಕ್ಕೆ ಜಿಗಿದಿದೆ.

ಮೊದಲ ಸ್ಥಾನಕ್ಕೆ ತರುವ ಸಲುವಾಗಿ ಶಿಕ್ಷಣ ಇಲಾಖೆ ಈ ಬಾರಿ ಹಲವಾರು ಸುಧಾರಣಾ ಕ್ರಮಗಳನ್ನು ಅನುಸರಿಸಿತ್ತು. ಕಳೆದ ಬಾರಿಗೆ ಹೋಲಿಸಿದರೆ ಫಲಿತಾಂಶದಲ್ಲಿ ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ.

ಪರೀಕ್ಷೆಗೆ ಕುಳಿತಿದ್ದ 2211 ವಿದ್ಯಾರ್ಥಿಗಳ ಪೈಕಿ 1825 ಮಂದಿ ತೇರ್ಗಡೆಯಾಗಿದ್ದಾರೆ. 386 ಮಂದಿ ಅನುತ್ತೀರ್ಣರಾಗಿದ್ದಾರೆ. 161 ಮಕ್ಕಳು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 383 ಮಕ್ಕಳು ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 396 ವಿದ್ಯಾರ್ಥಿಗಳು ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 467 ವಿದ್ಯಾರ್ಥಿಗಳು ಶೇ. 65ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 50 ವಿದ್ಯಾರ್ಥಿಗಳು ಶೇ. 50ಕ್ಕಿಂತ ಹೆಚ್ಚು ಅಂಕ ಗಳಿಸಿದ್ದರೆ, 368 ವಿದ್ಯಾರ್ಥಿಗಳು ಶೇ. 50ಕ್ಕಿಂತ ಕಡಿಮೆ ಅಂಕ ಪಡೆದಿದ್ದಾರೆ.

ಬರಗೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಎಚ್.ಎಂ. ವರ್ಷಿತಾ 625ಕ್ಕೆ 623 ಅಂಕ ಗಳಿಸಿದ್ದು ಮೊದಲ ಸ್ಥಾನದಲ್ಲಿದ್ದಾರೆ. ರಾಮನಾಥಪುರ ಹೋಬಳಿ ಹಂಪಾಪುರ ಗ್ರಾಮದ ಮಹೇಶ್, ಶೃತಿ ಅವರ ಮಗಳಾದ ವರ್ಷಿತಾ ಮಾಡಿರುವ ಗ್ರಾಮೀಣ ಪ್ರತಿಭೆ ಸಾಧನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. 

Post a Comment

0 Comments