ಅರಕಲಗೂಡು: ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ 20ನೇ ವಾರ್ಷಿಕ ಸಂಗೀತೋತ್ಸವದ ಎರಡನೇ ದಿನವಾದ ಗುರುವಾರ ವಿದ್ವಾನ್ ತೇಜಸ್ವಿ ರಘುನಾಥ್ ಕೊಳಲು ನುಡಿಸಿ ಜನರ ಮೆಚ್ಚುಗೆ ಗಳಿಸಿದರು.
ಪಟ್ಟಣ ಸುಬ್ರಹ್ಮಣ್ಯ ಅಯ್ಯರ್ ರಚಿಸಿದ ನವರಾಗ ಮಾಲಿಕ ವರ್ಣ ಕೃತಿಯನ್ನು ಆದಿತಾಳದಲ್ಲಿ ಪರಿದಾಸ ಮಿಚ್ಚತೆ ಬಿಲಹರಿ ಕೃತಿಯನ್ನು ಖಚಿಡಛಾಪು ಹಾಗೂ ತ್ಯಾಗರಾಜರ ಓರ ಜೂಪುಜು ಕನ್ನಡಗೌಳ ಮತ್ತು ಶಿವ ಶಿವ ಶಿವ ಎನರಾದ ಕಾಮವರ್ಧಿನಿ ಕೃತಿಯನ್ನು ಆದಿತಾಳದಲ್ಲಿ ಹಾಗೂ ವಿದ್ವಾನ್ ಆರ್.ಕೆ. ಪದ್ಮನಾಭ ಅವರು ರಚಿಸಿರುವ ಕನಕಾಂಗಿ ಮಾತೆ ಕನಕಾಂಗಿ ಕೃತಿಯನ್ನು ಆದಿತಾಳದಲ್ಲಿ ನುಡಿಸಿದರು. ವಿದ್ವಾನ್ ಎಚ್.ಕೆ. ರಘುರಾಮ್ ಪಿಟೀಲು, ಅನಿರುದ್ಧ ಎಸ್. ಭಟ್ ಮೃದಂಗ ಹಾಗೂ ಸುನಾದ್ ಅನೂರ್ ಖಂಜರಿ ನುಡಿಸಿ ಸಂಗೀತಾಸಕ್ತರ ಮನ ಸೂರೆಗೊಂಡರು.
ವಿದ್ವಾನ್ ಅಂಜಲಿ ಶ್ರೀರಾಮ್ ಗಾಯನಕ್ಕೆ ವಿದ್ವಾನ್ ವಿಶ್ವಜಿತ್ ಮತ್ತೂರು ಪಿಟೀಲು, ರವಿಶಂಕರ್ ಶರ್ಮ ಮೃದಂಗ, ಎಸ್. ಉತ್ತಮ್ ಘಟ ನುಡಿಸಿದರು. ವಿದ್ವಾನ್ ಯಶಸ್ವಿ ಸುಬ್ಬರಾವ್ ಪೀಟಿಲು ನುಡಿಸಿದರು. ಮೋಕ್ಷಿತ್ ಎಸ್. ಪಿಟೀಲು ಸಹವಾದ್ಯ, ವಿದ್ವಾನ್ ರೇಣುಕಾ ಪ್ರಸಾದ್ ಮೃದಂಗ ಮತ್ತು ಎ.ಎಸ್.ಎನ್. ಸ್ವಾಮಿ ಖಂಜರಿ ನುಡಿಸಿ ಸಾಥ್ ನೀಡಿದರು.
ಸಂಗೀತೋತ್ಸವದ ಸಾರಥ್ಯ ವಹಿಸಿದ್ದ ವಿದ್ವಾನ್ ಆರ್.ಕೆ. ಪದ್ಮನಾಭ ಮಾತನಾಡಿ, ಕೊಳಲು ಸಂಗೀತ ವಿಶಿಷ್ಟವಾದ ಪೌರಾಣಿಕ ವಾದ್ಯ. ಶೃತಿಬದ್ದವಾಗಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಆಕರ್ಷಣಾಶಕ್ತಿ ಇದ್ದು ಘನತೆ ಗಾಂಭೀರ್ಯ ಇದೆ. ಹಳ್ಳಿಯೊಂದರಲ್ಲಿ ನಡೆಯುತ್ತಿರುವ ಸಂಗೀತೋತ್ಸವಕ್ಕೆ ಅನೇಕ ವಿದ್ವಾಂಸರು ಆಗಮಿಸಿ ಸಂಗೀತ ಕಚೇರಿ ನಡೆಸಿಕೊಡುತ್ತಿರುವುದು ದೊಡ್ಡ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
0 Comments