ಜಾನುವಾರಗಳ ಆರೋಗ್ಯ ಕಾಪಾಡಿ ಹೈನುಗಾರಿಕೆ ಉಳಿಸಲು ಯೋಗಾ ರಮೇಶ್ ಆಗ್ರಹ

ಅರಕಲಗೂಡು: ರೋಗ ರುಜಿನಗಳಿಗೆ ತುತ್ತಾಗಿ ಮೂಕ ಪ್ರಾಣಿಗಳ ರೋಧನ ಒಂದು ಕಡೆಯಾದರೆ ಅವುಗಳನ್ನೆ ನೆಚ್ಚಿಕೊಂಡಿದ್ದ ಹೈನುಗಾರರು ಹೈರಾಣು, ಹೌದು ತಾಲೂಕಿನಲ್ಲಿ ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಕಾಲು ಬಾಯಿ ರೋಗಕ್ಕೆ ಲಸಿಕೆ ನೀಡಿ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್. ಯೊಗಾ ರಮೇಶ್ ಒತ್ತಾಯಿಸಿದರು.
ತಾಲೂಕಿನ ಪಾರಸನಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಕಾಲು ಬಾಯಿ ರೋಗಕ್ಕೆ ತುತ್ತಾದ ಜಾನುವಾರುಗಳನ್ನು ವೀಕ್ಷಿಸಿ ರೈತರಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನದಾತ ಬದುಕಿನ ಆಧಾರ ಸ್ಥಂಭವಾಗಿರುವ ಜಾನುವಾರುಗಳು ಕಾಯಿಲೆಗೆ ತುತ್ತಾಗಿ ಅಸು ನೀಗುತ್ತಿವೆ. ಇದೊಂದೆ ಊರಿನಲ್ಲಿ 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಮುತ್ತಿಗೆ, ಇಬ್ಬಡಿ ಗ್ರಾಮದಲ್ಲೂ ಜಾನುವಾರುಗಳು ರೋಗಬಾಧೆ ತಗುಲು ಸಾಯುತ್ತಿದ್ದು ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾನುವಾರುಗಳಿಗೆ ಹಲವಾರು ಹಳ್ಳಿಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡರೂ ಲಸಿಕಾ ಅಭಿಯಾನ ನಡೆಸಿ ಜೀವ ಉಳಿಸುವ ಕೆಲಸ ಆಗುತ್ತಿಲ್ಲ. ಪಶುಪಾಲನಾ ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಳ್ಳಿಗಳ ಕಡೆ ತಿರುಗಿಯೂ ನೋಡುತ್ತಿಲ್ಲ. ಒಂದು ಹಳ್ಳಿಯಲ್ಲಿ ಜಾನುವಾರುಗಳಿಗೆ ರೋಗ ತಗುಲಿದರೆ ಸುತ್ತಲಿನ ಐದು ಕಿಮೀ ವ್ಯಾಪ್ತಿಗೆ ಪಸರಿಸುತ್ತಿದೆ. ಇದರಿಂದ ಜಾನುವಾರುಗಳ ಸಾಕಾಣಿಕೆಗೆ ಮಾರಕವಾಗುತ್ತಿದೆ. ಸರ್ಕಾರ ಕೂಡಲೇ ಜಾನುವಾರುಗಳಿಗೆ ಸೂಕ್ತ ಲಸಿಕೆ ನೀಡಿ ರೈತರನ್ನು ಉಳಿಸಿಬೇಕು ಎಂದು ಆಗ್ರಹಿಸಿದರು.

Post a Comment

0 Comments