ಅರಕಲಗೂಡು: ಕನ್ನಡ ಸಾಹಿತ್ಯ ಪರಿಷತ್ತಿಗೆ ಮುಂದಿನ ತಿಂಗಳು ಚುನಾವಣೆ ನಡೆಯುವ ಸಾಧ್ಯತೆ ಇದ್ದು ತಾವು ಅಧ್ಯಕ್ಷರಾಗಿ ಆಯ್ಕೆಗೊಂಡರೆ ಪರಿಷತ್ತಿನ ಕಾರ್ಯ ಚಟುವಟಿಕೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದಾಗಿ ಅಧ್ಯಕ್ಷ ಸ್ಥಾನದ ಸ್ಪರ್ಧಿ ನಾಡೋಜ ಡಾ. ಮಹೇಶ್ ಜೋಷಿ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ 7 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಹೆಸರಾದ ಪರಿಷತಿನ ಸದಸ್ಯರ ಸಂಖ್ಯೆ ಕೇವಲ 3.10 ಲಕ್ಷ ಮಾತ್ರ ಇದ್ದು ಇದ್ದು ಏನೇನು ಸಾಲದು. ಇರುವ ಸದಸ್ಯರಲ್ಲೂ ಶೇ. 20 ರಷ್ಟು ಅನರ್ಹವಾಗಿದೆ. ರೂ 250 ಇದ್ದ ಅಜೀವ ಸದಸ್ಯತ್ವ ಶುಲ್ಕವನ್ನು ರೂ 500ಕ್ಕೆ ಹೆಚ್ಚಿಸಿದ ಕಾರಣ ಸದಸ್ಯತ್ವ ಹೊಂದಲು ಜನರು ಮೂದೆ ಬರುತ್ತಿಲ್ಲ, ಹೀಗಾಗಿ ಶುಲ್ಕವನ್ನು ಹಿಂದಿನಂತೆ ರೂ250ಕ್ಕೆ ಇಳಿಸುವ ಸಂಗಡ ಪ್ರತಿಯೊಬ್ಬ ಕನ್ನಡಿಗನನ್ನೂ ಸಂಸ್ಥೆಯ ಸದಸ್ಯರಾಗಿಸುವ ನಿಟ್ಟಿನಲ್ಲಿ ಸದಸ್ಯತ್ವ ಆಂದೋಲನ ಕೈಗೊಂಡು ಸದಸ್ಯತ್ವ ಹೊಂದಲು ಹೊಸ ತಂತ್ರಜ್ಞಾನವನ್ನು ಒಳಗೊಂಡ ಆ್ಯಪ್ ರೂಪಿಸುವುದಾಗಿ ಹೇಳಿದರು.
ಅಧ್ಯಕ್ಷ ಸ್ಥಾನಕ್ಕೆ ಪ್ರತಿಯೊಬ್ಬರಿಗೂ ಅವಕಾಶ ದೊರೆಯ ಬೇಕು ಎಂಬ ಹಿನ್ನೆಲೆಯಲ್ಲಿ ಒಬ್ಬರಿಗೆ ಒಂದೇ ಬಾರಿ ಅವಕಾಶ ಎಂಬ ನಿಯಮ ಜಾರಿಗೆ ತರುವುದಲ್ಲದೆ, ತಾಲ್ಲೂಕೂ ಹೋಬಳಿ ಮಟ್ಟದ ಅಧ್ಯಕ್ಷ ಸ್ಥಾನಗಳಿಗೂ ಚುನಾವಣೆ ನಡೆಸಲಾಗುವುಸದು. ಪರಿಷತ್ತಿನ ಹಳೆಯದಾದ ಕೆಲವು ನಿಯಮಗಳ ಬದಲಾವಣೆ ಮತ್ತು ಹೊಸ ನಿಯಮಗಳ ಅಳವಡಿಕೆಗೆ ನಿವೃತ್ತ ನ್ಯಾಯ ಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡುವುದಾಗಿ ತಿಳಿಸಿ, ರಾಜ್ಯದಾದ್ಯಂತ ಪ್ರವಾಸ ನಡೆಸಿ ಪ್ರಚಾರ ಕೈಗೊಂಡಿದ್ದು ಪರಿಷತ್ತಿನಲ್ಲಿ ಹೊಸತನ ರೂಪಿಸಲು ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಹೈ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಮಹೇಶ್ ಜೋಷಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಹೊಸತನ ತರಲು ಉತ್ಸುಕರಾಗಿದ್ದು ಇವರನ್ನು ಬೆಂಬಲಿಸುವಂತೆ ಕೋರಿದರು.
ನಬೀರ್ ಸಾಬ್ ಕುಷ್ಠಗಿ, ಸಿದ್ದೇಗೌಡ, ಚನ್ನಬಸವ ಕೊಟಗಿ ಗೋಷ್ಠಿಯಲ್ಲಿದ್ದರು.
0 Comments