ಅರಕಲಗೂಡು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಯುವಕರು ಉನ್ನತ ಹುದ್ದೆಗಳನ್ನು ಗಳಿಸಲು ಹರಸಾಹಸ ಪಡಬೇಕಾದ ಸ್ಥಿತಿ ಉಂಟಾಗಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಅರಸೀ ಕಟ್ಟೆ ಅಮ್ಮ ದೇವಾಲಯ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಬಹಳಷ್ಟು ಅಭ್ಯರ್ಥಿಗಳು ರೈತಾಪಿ, ಕೂಲಿ, ಕೃಷಿ ಕಾರ್ಮಿಕರ ಕುಟುಂಬಗಳಿಗೆ ಸೇರಿದ್ದು ಇವರು ನಗರಗಳಿಗೆ ತೆರಳಿ ದುಬಾರಿ ಹಣ ವೆಚ್ಚಮಾಡಿ ತರಬೇತಿ ಪಡೆದುಕೊಳ್ಳಲು ಸಾಧ್ಯವಾಗದ ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಉನ್ನತ ಹುದ್ದೆಗಳನ್ನು ಗಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಯುವಕರಿಗೆ ನೆರವಾಗುವ ಉದ್ದೇಶದಿಂದ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೇವಲ ಎರಡು ದಿನಗಳ ತರಬೇತಿಯಿಂದ ಅಭ್ಯರ್ಥಿಗಳಿಗೆ ನೀರೀಕ್ಷಿತ ಮಟ್ಟದ ತರಬೇತಿ ದೊರಕಿಸುವುದು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಪ್ರತಿ ತಿಂಗಳ ಎರಡನೆ ಶನಿವಾರ ಮತ್ತು ಭಾನುವಾರ ಈ ತರಬೇತಿ ಕಾರ್ಯಾಗಾರ ನಿರಂತರವಾಗಿ ಮುಂದುವರೆ ಯಲಿದೆ.ಕಾರ್ಯಾಗಾರದಲ್ಲಿ ಐ ಎಎಸ್,ಕೆಎಎಸ್,ಪಿಎಸ್ಐ,ಪಿಡಿಒ, ಹಾಸ್ಟೆಲ್ ವಾರ್ಡನ್, ಎಫ್ ಡಿಎ, ಎಸ್ ಡಿಎ,ಪಿಸಿ ಹುದ್ದೆಗಳಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ, ಯುವ ಜನರು ಇದರ ಉಪಯೋಗ ಪಡೆದು ಕೊಳ್ಳುವಂತೆ ಸಲಹೆ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಹೂವಣ್ಣ, ಸದಸ್ಯ ಅನಿಕೇತನ್, ಪ್ರಾಚಾರ್ಯ ಬಸವರಾಜ್, ಬಿಇಒ ಮದನ್ ಮೋಹನ್ ಉಪಸ್ಥಿತರಿದ್ದರು.
0 Comments