ಶುಂಠಿಗೆ ಬೆಂಬಲ ಬೆಲೆ ಕೊಡಿ; ರೈತರ ನೆರವಿಗೆ ಬರಲು ಯೋಗಾರಮೇಶ್ ಆಗ್ರಹ

ಅರಕಲಗೂಡು:  ಆಸೆಯ ಬೆಳೆ ಶುಂಠಿ ರೈತರವಜೇಜು ತುಂಬಿಸುತ್ತಿಲ್ಲ, ಬೆಲೆ ಇಲ್ಲದೆ ಶುಂಠಿಗೆ ಕೊಳೆರೋಗ ಕಾಣಿಸಿಕೊಂಡು ತೀವ್ರ ಆರ್ಥಿಕ  ಸಂಕಷ್ಟಕ್ಕೆ ಗುರಿಯಾಗಿರುವ ರೈತರ ನೆರವಿಗೆ ಧಾವಿಸುವಂತೆ ಪೊಟ್ಯಾಟೊ ಕ್ಲಬ್ ಅಧ್ಯಕ್ಷ  ಎಚ್. ಯೋಗಾರಮೇಶ್  ಆಗ್ರಹಿಸಿದರು. 

ಪಟ್ಟಣದ ಪೊಟ್ಯಾಟೊ ಕ್ಲಬ್ ಕಚೇರಿಯಲ್ಲಿ ಬುಧವಾರ ನಡೆದ ಶುಂಠಿ ಬೆಳೆಗಾರರ ಸಭೆಯಲ್ಲಿ ಮಾತನಾಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ಶುಂಠಿಯನ್ನು ಬೆಳೆಯುತ್ತಿದ್ದು ಎಲ್ಲ ಕಡೆಗಳಲ್ಲೂ ಇದೆ ಪರಿಸ್ಥಿತಿ  ಉಂಟಾಗಿದೆ.  ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಶುಂಠಿ ಬೆಳೆದಿದ್ದು ಕೋಟ್ಯಾಂತರ ರೂ ನಷ್ಟ ಅನುಭವಿಸುವಂತಾಗಿದೆ.   ಕಳೆದ  ಸಾಲಿನಲ್ಲಿ ಶುಂಠಿಗೆ ಉತ್ತಮ ಬೆಲೆ ದೊರೆತ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ ಹಣ ತಂದು ಕೃಷಿಗೆ ವ್ಯಯಿಸಿದ್ದರು. ಆದರೆ ಬೆಳೆ ಕೈಕೊಟ್ಟ ಕಾರಣ ರೈತರ ಬದುಕು ಇನ್ನಷ್ಟು ಆತಂಕ ಕಾರಿಯಾಗಿದೆ ಎಂದರು. 

ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರು ರೈತರ ಸಮಸ್ಯೆ ಕುರಿತು ದನಿ ಎತ್ತದೆ ಅನಗತ್ಯ ವಿಷಯಗಳ ಕುರಿತು ಚರ್ಚಿಸಿ ಕಾಲಹರಣ ಮಾಡುತ್ತಿದ್ದಾರೆ. ಬೆಲೆ ಏರಿಕೆ ಕುರಿತು ಮಾತನಾಡುವ ಇವರು ರೈತರ ಉತ್ಪನ್ನಗಳಿಗೆ ಬೆಲೆ ಕಮ್ಮಿಯಾಗಿರುವ ಕುರಿತು  ಚಕಾರ  ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಶುಂಠಿ ಬೆಲೆಗೆ ಬೆಂಬಲ ಬೆಲೆ ಘೋಷಿಸಬೇಕು ಸರ್ಕಾರದಿಂದ ಸ್ಪಂದನೆ ದೊರೆಯದಿದ್ದರೆ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

ರೈತರಿಗೆ ಉತ್ತಮ ಗುಣಮಟ್ಟದ ಬೀಜ  ಒದಗಿಸುವ ಕುರಿತು ಕ್ರಮ ಕೈಗೊಳ್ಳಬೇಕು,  ಶುಂಠಿ ಯನ್ನು ಬೆಳೆವಿಮಾ ವ್ಯಾಪ್ತಿಗೆ ಒಳಪಡಿಸಬೇಕು,  ಶುಂಠಿ  ಸಂಸ್ಕರಣಾ ಘಟಕಗಳನ್ನು ತೆರೆಯಬೇಕು, 60 ಕೆಜಿ ಗೆ ರೂ1500 ಬೆಂಬಲ ಬೆಲೆ ನೀಡಬೇಕು, ತೋಟಗಾರಿಕೆ ವಿಶ್ವ ವಿದ್ಯಾಲಯ ಮತ್ತು ಇಲಾಖೆ  ಬೆಳೆಗಾರರಿಗೆ ಅಗತ್ಯ ಮಾರ್ಗದರ್ಶನ ನೀಡುವಂತೆ ಕೋರಿ  ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು. ಬಳಿಕ ಮೆರವಣಿಗೆಯಲ್ಲಿ ತಾಲ್ಲೂಕು  ಕಚೇರಿಗೆ ತೆರಳಿ  ಗ್ರೇಡ್ 2 ತಹಶೀಲ್ದಾರ್ ಅಂಕೇಗೌಡ  ಅವರಿಗೆ ಮನವಿ ಸಲ್ಲಿಸಲಾಯಿತು. 

ಕ್ಲಬ್ ನ ಮುಖಂಡರಾದ ಚಂದೀಗೌಡ, ಶಿವಲಿಂಗ ಶಾಸ್ತ್ರಿ, ನಳಿನಿ, ಹೊನ್ನವಳ್ಳಿ ಗ್ರಾಪಂ ಅಧ್ಯಕ್ಷೆ ಶಕುಂತಲಾ, ಹೊನ್ನವಳ್ಳಿ ಲೋಕೇಶ್, ಶುಂಠಿ ಬೆಳೆಗಾರರಾದ ಹಿಂದಲಹಳ್ಳಿ ನಾಗೇಶ್, ಗಂಗಾಧರ್, ವಕೀಲ ಗಿರೀಶ್  ಇದ್ದರು.

Post a Comment

0 Comments