ಜತೆಯಲ್ಲಿರುವ ರೌಡಿ ಶೀಟರ್ ಗಳನ್ನು ಬಿಟ್ಟು ಕೇರಳದಲ್ಲಿರುವ ವ್ಯಕ್ತಿಯ ಪರ ರಾಮಸ್ವಾಮಿಗೇಕೆ ಆಸಕ್ತಿ ಎಂದು ತಿವಿದ ಎ. ಮಂಜು


ಅರಕಲಗೂಡು: ರೌಡಿ ಶೀಟರ್ ಪರ ಸದ್ದು ಮೊಳಗಿಸಿದ ಶಾಸಕ, ತನ್ನ ಜತೆಯಲ್ಲೇ ಇರುವ ರೌಡಿ ಶೀಟರ್‌ಗಳ ಹೆಸರನ್ನು ಪೊಲೀಸ್ ಇಲಾಖೆ ಕಡತದಿಂದ ತೆಗೆಸಲು ಶಿಫಾರಸ್ಸು ಮಾಡದ ಶಾಸಕ ಎ.ಟಿ. ರಾಮಸ್ವಾಮಿ ವೈಯಕ್ತಿಕ ಲಾಭಕ್ಕಾಗಿ ಕೇರಳದಲ್ಲಿರುವ ವ್ಯಕ್ತಿಯ ಪರ ವಕಾಲತ್ತು ವಹಿಸಿರುವುದರ ಹಿಂದಿನ ಒಳ ಮರ್ಮವೇನು ಎಂದು ಮಾಜಿ ಸಚಿವ ಎ. ಮಂಜು ಖಾರವಾಗಿ ಪ್ರಶ್ನಿಸಿದರು.

ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ವ್ಯಕ್ತಿಯ ಕೃತ್ಯಗಳ ಹಿನ್ನಲೆ ಆಧರಿಸಿ ಕೆಲವು ವರ್ಷಗಳ ಹಿಂದೆಯೇ ಪೊಲೀಸರು ಆತನ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಿದ್ದಾರೆ. ಆತ ಈಗ ಕೇರಳದಲ್ಲಿ ನೆಲೆಸಿದ್ದಾನೆ. ಅಂತಹ ರೌಡಿ ಶೀಟರ್ ಹೆಸರು ತೆಗೆಸಲು ಶಿಫಾರಸ್ಸು ಮಾಡುತ್ತಿರುವ ಶಾಸಕರು, ಪೊಲೀಸರ ವಿರುದ್ದ ಲಂಚ ಕೇಳಿದ ಆರೋಪ ಹೊರಿಸುವುದು ತರವಲ್ಲ. ರೌಡಿ ಶೀಟರ್ ಪರ ವಕಾಲತ್ತು ವಹಿಸಿ ಗುರುತರ ದಾಖಲೆಗಳಿಲ್ಲದೆ ಕೇವಲ ಬಾಯಿ ಮಾತಿನಲ್ಲಿ ಪೊಲೀಸರನ್ನು ತಪ್ಪಿತಸ್ಥರು ಎನ್ನುವುದು ಹಾಸ್ಯಾಸ್ಪದವಾಗಿದೆ ಎಂದು ಅರೇಮಾದನಹಳ್ಳಿ ಮಠದಲ್ಲಿ ವಾಸಂತಿ ನಲಿದಾಗ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದ ನಂತರ ಸುದ್ದಿಗಾರರಿಗೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದರು.

ತಾಲೂಕಿನ ಕೆಲವು ರೌಡಿ ಶೀಟರ್‌ಗಳು ಶಾಸಕ ಎ.ಟಿ. ರಾಮಸ್ವಾಮಿ ಅವರ ಅಕ್ಕಪಕ್ಕದಲ್ಲಿಯೇ ಇದ್ದಾರೆ. ರೌಡಿ ಪಟ್ಟಿಯಲ್ಲಿರುವ ಅಂತಹ ವ್ಯಕ್ತಿಗಳ ಪರ ಶಿಫಾರಸ್ಸು ಮಾಡದೆ ಹೊರ ರಾಜ್ಯ ಕೇರಳದಲ್ಲಿ ನೆಲೆಸಿರುವ ರೌಡಿ ಶೀಟರ್ ಪರ ಆಸಕ್ತಿ ತೋರುತ್ತಿರುವುದು ಯಾವ ರೀತಿಯ ಲಾಭಕ್ಕಾಗಿ ಎನ್ನುವ ಪ್ರಶ್ನೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಪೊಲೀಸರ ಮೇಲಿನ ಆರೋಪ ಸತ್ಯವೋ ಸುಳ್ಳೋ ಎನ್ನುವುದು ಅರ್ಥವಾಗುತ್ತಿಲ್ಲ ಅಥವಾ ಶಾಸಕರಿಗೆ ವೈಯಕ್ತಿಕವಾಗಿ ಲಾಭವಾಗಿಲ್ಲ ಎನ್ನುವ ಕಾರಣಕ್ಕೆ ಸಿಪಿಐ ವಿರುದ್ದ ಆರೋಪ ಮಾಡುತ್ತಿರುವ ದುರುದ್ದೇಶ ಅಡಗಿದೆ. ರೌಡಿ ಶೀಟರ್ ಹೆಸರು ಕೈಬಿಡುವ ತೀರ್ಮಾನವನ್ನು ಪೊಲೀಸರು ಮತ್ತು ನ್ಯಾಯಾಲಯ ತೆಗೆದುಕೊಳ್ಳುತ್ತದೆ. ರೌಡಿ ಪಟ್ಟಿಯಿಂದ ಹೆಸರು ತೆಗೆಸುವ ಅಧಿಕಾರವು ರಾಜಕಾರಣಿಗಳಿಗೆ ಇಲ್ಲ, ಕೇರಳದಲ್ಲಿರುವ ರೌಡಿ ಶೀಟರ್ ಪರ ವಕಾಲತ್ತು ವಹಿಸಿರುವುದು ಶಾಸಕರ ತಪ್ಪು ನಡೆ ಎಂದು ಖಂಡಿಸಿದರು.

ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಇದ್ದರು.

Post a Comment

0 Comments