ಅರಕಲಗೂಡು: ಪಟ್ಟಣದಲ್ಲಿ ಮೂಲ ಸೌರ್ಯಗಳಿಗೆ ಜನ ಹಪಹಪಿಸುವಂತಾಗಿದೆ. ಹೌದು, ಹಲವಾರು ಬಡಾವಣೆಗಳಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆ ಇದ್ದು ಸರಿಪಡಿಸಲು ಕ್ರಮಕ್ಕೆ ಶುಕ್ರವಾರ ನಡೆದ ಪಪಂ ವಿಶೇಷ ಶಭೆಯಲ್ಲಿ ಸದಸ್ಯರು ಪಕ್ಷ ಬೇಧ ಮರೆತು ಒಕ್ಕೊರಲಿನಿಂದ ಅಗ್ರಹಿಸಿದರು.
ಅಧ್ಯಕ್ಷ ಹೂವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಮ್ಮ ವಾರ್ಡ್ ನಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ ಮುಂತಾದ ಮೂಲಸೌಕರ್ಯಗಳ ಕೊರತೆ ಇದೆ. ಇದನ್ನು ಸರಿಪಡಿಸದೆ ಉದ್ಯಾನದ ಅಭಿವೃದ್ದಿಗೆ ರೂ 3ಲಕ್ಷ ಹಣ ನಿಗಧಿ ಮಾಡಿರುವ ಕುರಿತು ಸದಸ್ಯೆ ಎಚ್.ಎಸ್.ರಶ್ಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮೊದಲು ಜನರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಲು ಆಧ್ಯತೆ ನೀಡಿ, ನಂತರ ಉದ್ಯಾನದ ಅಭಿವೃದ್ದಿಗೆ ಗಮನ ಹರಿಸುವಂತೆ ಆಗ್ರಹಿಸಿದರು. ಬಡಾವಣೆಯಲ್ಲಿ ರಸ್ತೆ ಹಾಳಾಗಿದೆ. 500 ಮೀ ರಸ್ತೆ ಅಭಿವೃದ್ಧಿಗೆ ಮನವಿ ನೀಡಿದರೆ ಕೇವಲ 22 ಮೀಟರ್ ರಸ್ತೆ ದುರಸ್ಥಿ ನಡೆದಿದೆ. ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ವಿದ್ಯುತ್ ದೀಪ ಕೆಟ್ಟು ಆರು ತಿಂಗಳಾದರೂ ಸರಿಪಡಿಸಲು ಕ್ರಮಕೈಗೊಂಡಿಲ್ಲ. ಇಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ,ನಂಜೇಗೌಡ ಪುತ್ಥಳಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸುವ ಸಂಗಡ ಇಲ್ಲಿನ ಉದ್ಯಾನದ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸದಸ್ಯ ರಮೇಶ್ ವಾಟಾಳ್ ತಮ್ಮ ಬಡಾವಣೆಯ ಗ್ರಂಥಾಲಯ ರಸ್ತೆಯಲ್ಲಿ ಕುಡಿಯುವ ನೀರು ಸರಭರಾಜಿನ ಸಮಸ್ಯೆ ಇದ್ದು ಸರಿಪಡಿಸುವಂತೆ ಆಗ್ರಹಿಸಿದರು. ಶಾಸಕರು ಅಂಬೇಡ್ಕರ್ ಭವನದ ಕಾಮಗಾರಿ ಕುರಿತು ಸದನದ ಗಮನ ಸೆಳೆದು 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರಿಂದ ಭರವಸೆ ಪಡೆದಿರುವುದು ಅಭಿನಂದನೀಯ, ಅದರಂತೆ ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಒಳಚರಂಡಿ ಕಾಮಗಾರಿಯ ಕುರಿತೂ ಸರ್ಕಾರದ ಗಮನ ಸೆಳೆಯಬೇಕು. ಈ ಕುರಿತು ಶಾಸಕರನ್ನು ಕೋರುವ ನಿರ್ಣಯ ಅಂಗೀಕರಿಸುವಂತೆ ಕೋರಿದರು.
ಒಳಚರಂಡಿ ಕಾಮಗಾರಿ ಕುರಿತು ಶಾಸಕರ ಸೂಚನೆಯಂತೆ ತ್ಯಾಜ್ಯ ಸಂಗ್ರಹಕ್ಕೆ ಸ್ಥಳ ಗುರುತಿಸುವ ಕಾರ್ಯ ನಡೆದಿದೆ ಎಂದು ಮುಖ್ಯಾಧಿಕಾರಿ ಶಿವಕುಮಾರ್ ಸಭೆಗೆ ತಿಳಿಸಿದರು.
ತಮ್ಮ ವಾರ್ಡ್ ನಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕಡೆಗಣಿಸಲಾಗಿದೆ. ಸಭೆಯಲ್ಲಿ ಚರ್ಚಿಸಲೂ ಅವಕಾಶ ನೀಡುತ್ತಿಲ್ಲ, ರಾಜಕೀಯ ದ್ವೇಶ ಸಾಧನೆ ನಡೆಯುತ್ತಿದೆ ಎಂದು ಆರೋಪಿಸಿ ಉಪಾಧ್ಯಕ್ಷ ನಿಖಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಲು ಮುಂದಾದರು. ಈ ಹಂತದಲ್ಲಿ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ, ವಾಗ್ವಾದ ಏರ್ಪಟ್ಟು ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಬೀದಿ ದೀಪಗಳ ವ್ಯವಸ್ಥೆ ಸರಿ ಇಲ್ಲ. ಕ್ರಮ ಕೈಗೊಳ್ಳುವಂತೆ ಕೋರಿದರೂ ನಿರ್ಲಕ್ಷ ತೋರಲಾಗುತ್ತಿದೆ ಎಂದು ನಿಖಿಲ್ ಕುಮಾರ್ ಕಿಡಿಕಾರಿದರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ವಾರ್ಡಗಳ ಅಭಿವೃದ್ಧಿಗೆ ಮಾತ್ರ ಗಮನ ಹರಿಸಿದರೆ ಉಳಿದ ಸದಸ್ಯರ ವಾರ್ಡಗಳ ಪಾಡೇನು. ಇಡೀ ಪಟ್ಟಣದ ಅಭಿವೃದ್ಧಿಗೆ ಗಮನ ನೀಡುವಂತೆ ಸದಸ್ಯ ರಮೇಶ್ ವಾಟಾಳ್ ಒತ್ತಾಯಿಸಿದರು. ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಣೆಗೆ ಪೌರ ಕಾರ್ಮಿಕರ ಕೊರತೆ ಇದ್ದು ಹೆಚ್ಚುವರಿ ಕಾರ್ಮಿಕರ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸದಸ್ಯೆ ರಶ್ಮಿ ಆಗ್ರಹಿಸಿದರು. ಈ ಕುರಿತು ಟೆಂಡರ್ ಪ್ರಕ್ರಿಯೆ ನಡೆದಿದೆ ಶೀಘ್ರದಲ್ಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅದ್ಯಕ್ಷ ಹೂವಣ್ಣ ಸಭೆಗೆ ತಿಳಿಸಿದರು. ಸದಸ್ಯರಾದ ಪ್ರದೀಪ್ ಕುಮಾರ್ ಕೃಷ್ಣಯ್ಯ, ಸುಭಾನ್ ಷರೀಪ್, ಸುಮಿತ್ರ ವಿವಿಧ ಸಮಸ್ಯೆ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
0 Comments