ಪವಿತ್ರ ಕಾವೇರಿ ನದಿ ದಂಡೆ ಮೇಲಿರುವ ಹೊಯ್ಸಳರ ಕಾಲದ ದೇವಾಲಯ ದಶಕಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದು ಕೆಲ ದಿನಗಳಿಂದ ಸುರಿದ ಮಳೆಗೆ ಗೋಪುರ ಭಾಗದ ಉದ್ದಕ್ಕೂ ಬಿರುಕು ಕಾಣಿಸಿಕೊಂಡು ದ್ವಾರಪಾಲಕ ವಿಗ್ರಹ ಕುತ್ತಿಗೆ ಭಾಗಕ್ಕೆ ಕಳಚಿ ಧರೆಗುರುಳಿದೆ.
ಗೋಪುರದ ಎರಡು ಕಳಸಗಳು, ಗೋಪುರದ ಇನ್ನುಳಿದ ಭಾಗ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಕಿದ್ದು ಭಕ್ತರು ಜೀವ ಭಯದಲ್ಲಿ ಪೂಜೆಗೆ ತೆರಳಬೇಕಿದೆ.
ಮಳೆಗಾಲದಲ್ಲಿ ದೇವಾಲಯದ ಗರ್ಭಗುಡಿ, ಪೌಳಿ, ಒಳ ಪ್ರಾಂಗಣಲ್ಲಿ ನೀರು ಸೋರಿಕೆಯಾಗುತ್ತದೆ. ಕೆಲ ದಿನಗಳಿಂದ ಬಿದ್ದ ಮಳೆಗೆ ದೇವಾಲಯ ಜಲಾವೃತಗೊಂಡಿದ್ದು ಅರ್ಚಕರು ನಿತ್ಯ ಮಳೆ ನೀರು ಹೊರ ಚೆಲ್ಲುವುದೇ ಆಗಿದೆ.
ಲಂಕೆಯ ರಾವಣನನ್ನು ಸಂಹರಿಸಿ ಬ್ರಾಹ್ಮಣ ಹತ್ಯಾ ದೋಷ ಪರಿಹಾರಕ್ಕಾಗಿ ಪುಷ್ಪಕ ವಿಮಾನದಲ್ಲಿ ಸುಕ್ಷೇತ್ರಕ್ಕೆ ಬಂದಿಳಿದ ಶ್ರೀರಾಮ ಕಾವೇರಿ ನದಿ ದಂಡೆಯ ಪೊದೆಯಲ್ಲಿದ್ದ ಶಿವಲಿಂಗುವನ್ನು ಪೂಜಿಸಿ ಅರ್ಚಿಸಿದ್ದರಿಂದ ರಾಮೇಶ್ವರ ಎಂದು ಪ್ರಸಿದ್ಧಿ ಪಡೆದಿದೆ. ಪೂರ್ವದಲ್ಲಿ ವಾಸವಾಪುರಿ ಎಂದಿದ್ದ ಊರು ತದನಂತರ ರಾಮನಾಥಪುರ ಎಂದಾಯಿತು ಎನ್ನುವುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಚಾತುರ್ಯುಗ ಮೂರ್ತಿ ಶ್ರೀ ರಾಮೇಶ್ವರ ದೇವಾಲಯ ರಾಮನಾಥಪುರ ಹೆಸರಿಗೆ ಮುಕುಟಪ್ರಾಯವಾಗಿದ್ದು ಭಕ್ತರ ನೆಚ್ಚಿನ ಪವಿತ್ರ ತಾಣವಾಗಿದ್ದು ಅಳಿವಿನಂಚಿನಲ್ಲಿದೆ.
ಹೊಯ್ಸಳರ ಕಾಲದ ದೇವಸ್ಥಾನಕ್ಕೆ ವಿಜಯನಗರ ಅರಸರ ಕಾಲದಲ್ಲಿ ರಾಜಗೋಪುರ ಸ್ಥಾಪಿಸಲಾಗಿತ್ತು. ಪುರಾತನ ಕಾಲದ ದೇವಸ್ಥಾನದ ಗರ್ಭಗುಹೆ, ಸೂಕ್ಷö್ಮ ಕುಸುರಿ ಕೆತ್ತನೆಯ ಶಿಲ್ಪ ಕಲಾಕೃತಿಗಳು, ಸುತ್ತಲೂ ನಾನಾ ದೇವರ ವಿಗ್ರಹಳಿಂದ ಕೂಡಿರುವ ಪಾರ್ಶ್ವಗೋಡೆಗಳು, ಮುವತ್ತೈದು ಶಿವಲಿಂಗುಗಳ ಗುಹೆ ಗುಡಿ ಸಮೇತ ಬಿರುಕು ಬಿಟ್ಟು ದಿನಗಣನೆ ಎಣಿಸುತ್ತಿದ್ದು ಕಾವೇರಿ ನದಿ ಪಾಲಾಗುವ ಆತಂಕ ಎದುರಿಸುತ್ತಿದೆ.
ಹಲವು ವರ್ಷಗಳಿಂದ ಸಂಬಂಧಪಟ್ಟವರಿಗೆ ಎಷ್ಟೇ ಮನವಿ ಮಾಡಿದರೂ ದೇವಾಲಯ ಅಭಿವೃದ್ಧಿ ಪಡಿಸುತ್ತಿಲ್ಲ. ಗೋಪುರ ಭಾಗವು ಶಿಥಿಲವಾಗಿ ನನ್ನ ಹಾಗೂ ಭಕ್ತರ ತಲೆ ಮೇಲೆ ಬೀಳುತ್ತಿದ್ದು ಕೂದಲೆಳೆ ಅಂತರದಲ್ಲಿ ಪಾರಾದೆವು ಎಂದು ಗ್ರಾಪಂ ಸದಸ್ಯ ಸಿದ್ದಯ್ಯ ಸಮಸ್ಯೆ ಬಿಚ್ಚಿಟ್ಟರು.
ದೇವಾಲಯವನ್ನು ಅಭಿವೃದ್ಧಿ ಪಡಿಸದಿದ್ದರೆ ಪುರಾತನ ಕಾಲದ ಸ್ಮಾರಕ ಅಳಿದು ಇತಿಹಾಸದ ಪುಟ ಸೇರಲಿದೆ ಎಂದು ಅರ್ಚಕ ಶ್ರೀನಿವಾಸ್ ನೋವು ತೋಡಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿ, ಪುರಾಣೇತಿಹಾಸ ಹೊಂದಿರುವ ದೇವಸ್ಥಾನ ಅಭಿವೃದ್ಧಿ ಪಡಿಸಲು 4 ಕೋಟಿ ರೂ ಮಂಜೂರಾಗಿತ್ತು. ಈ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿತ್ತು. ಇಲಾಖೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸುಪರ್ದಿಗೆ ವಹಿಸಿ ದೇವಸ್ಥಾನ ಜೀರ್ಣೋದ್ಧಾರಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಕಾರಾಣಾಂತರಗಳಿAದ ಸಾಧ್ಯವಾಗಲಿಲ್ಲ. ಗ್ರಾಮದ ಹಿರಿಯರು, ಸ್ಥಳೀಯರು ದೇವಸ್ಥಾನ ಉಳಿಸಲು ಮನಸ್ಸು ಮಾಡಬೇಕು. ಇದಕ್ಕೆ ನನ್ನ ಸಂಪೂರ್ಣ ಬೆಂಬಲಿವಿದೆ ಎಂದು ತಿಳಿಸಿದರು.
ಉಪ ತಹಸೀಲ್ದಾರ್ ಸಿ. ಸ್ವಾಮಿ, ಗ್ರಾಪಂ ಅಧ್ಯಕ್ಷೆ ಹೇಮಲತಾ ಸಣ್ಣಸ್ವಾಮಿ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಮೋಹನ್, ಸಿದ್ದಯ್ಯ, ಪಿಡಿಒ ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಸಂಪಾದಕ - ರವಿ
0 Comments