ಅರಕಲಗೂಡು: ತಾಲೂಕಿನ ಕಟ್ಟೇಪುರ ಅಣೆಕಟ್ಟೆಯಲ್ಲಿ ಸಾವಿರಾರು ರೈತರ ಹಿತ ಬಲಿಕೊಟ್ಟು ಖಾಸಗಿ ಬಂಡವಾಳ ಶಾಹಿ ವ್ಯಕ್ತಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಸ್ಥಾಪಿಸಿದ್ದ ಜಲ ವಿದ್ಯುತ್ ಸ್ಥಾವರದ ಬಳಿ ನಾಲೆಯನ್ನು 1 ಕೋಟಿ ರೂ ವೆಚ್ಚದಲ್ಲಿ ದುರಸ್ತಿ ಪಡಿಸಿ ಸರಿಪಡಿಸಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ತುಂಬಿ ತುಳುಕುತ್ತಿದ್ದ ಅಣೆಕಟ್ಟೆಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಅಣೆಕಟ್ಟೆಯ ಎಡ ಮತ್ತು ಬಲದಂಡೆ ನಾಲೆ ಮೂಲಕ 8110 ಎಕರೆ ಜಮೀನಿಗೆ ನೀರುಣಿಸಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಜಲ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿತ್ತು. ನಾಲೆ ಬೆಡ್ ಲೆವೆಲ್‌ಗಿಂತ ಆರು ಅಡಿ ತಳಕ್ಕಿಟ್ಟು ಅಣೆಕಟ್ಟೆ ನೀರು ಜಲ ವಿದ್ಯುತ್ ಸ್ಥಾವರಕ್ಕೆ ಹೆಚ್ಚು ಸರವಾಗಿ ಹರಿಯುವಂತೆ ಮಾಡಲಾಗಿತ್ತು. ಬಂಡವಾಳ ಶಾಹಿ ವ್ಯಕ್ತಿಯೊಬ್ಬರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಸಲಾಗಿತ್ತು. ಬಂಡವಾಳ ಶಾಹಿ ವ್ಯಕ್ತಿಯೊಬ್ಬರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಇದರ ಹಿಂದೆ ಅಡಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲೇ ನಾಲೆಯಲ್ಲಿ ನೀರು ಹರಿಯುವುದೇ ಕಷ್ಟಕರವಾಗಿತ್ತು. ಜಲ ವಿದ್ಯುತ್ ಸ್ಥಾವರ ಸ್ಥಾಪಿಸಿದ ಬಳಿಕ ನಾಲೆಗೆ ನೀರು ಹತ್ತುವುದೇ ನಿಂತು ಹೋಗಿತ್ತು. ರೈತರ ಸಂಕಷ್ಟವನ್ನು ಮನಗಂಡು ಮತ್ತೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಜಲ ವಿದ್ಯುತ್ ಸ್ಥಾವರನ್ನು ಸರಿಪಡಿಸಿ ನಾಲೆಯಲ್ಲಿ ಕೊನೆ ಹಂತದ ವರೆಗೆ ನೀರು ತಲುಪುವಂತೆ ವ್ಯವಸ್ಥೆಗೊಳಿಸಲಾಗಿದೆ ಎಂದರು.
ಅಣೆಕಟ್ಟೆಯ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನದ ಬಳಿ ನಿರ್ಮಿಸಿರುವ ಸೇತುವೆಯನ್ನು ವೈಜ್ಞಾನಿಕವಾಗಿ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹಾರಂಗಿ ಮಹಾ ಮಂಡಲ ಅಧ್ಯಕ್ಷ ಚೌಡೇಗೌಡ, ಹಾರಂಗಿ ಪುನರ್ವಸತಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯರಾಂ, ಜಿಪಂ ಮಾಜಿ ಸದಸ್ಯ ಬಿ.ಜೆ. ಅಪ್ಪಣ್ಣ, ಕೃಷ್ಣೇಗೌಡ ಮುಂತಾದವರು ಇದ್ದರು.
ಸಂಪಾದಕ - ರವಿ
0 Comments