ಅರಕಲಗೂಡು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ವಿವಿಧ ಸಂಘ, ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಿ ಪೋಷಕರ ಮನವೊಲಿಸುವ ಕೆಲಸ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಮನಮೋಹನ್ ಮನವಿ ಮಾಡಿದರು.
ಪಟ್ಟಣದಲ್ಲಿ ವಿವಿಧ ಶಿಕ್ಷಕರ ಸಂಘಟನೆಗಳು ಮಂಗಳವಾರ ಆಯೋಜಿಸಿದ್ದ ಶಾಲಾ ಮಕ್ಕಳ ದಾಖಲಾತಿ ಆಂದೋಲನ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಲಾಕ್‌ಡೌನ್ ಪರಿಣಾಮ ಶಾಲೆಗಳನ್ನು ತೆರೆದಿರಲಿಲ್ಲ. ಇದೀಗ ಶಾಲೆಗಳನ್ನು ತೆರೆಯಲಾಗುತ್ತಿದ್ದು ಮಕ್ಕಳ ಹಾಜರಾತಿ ಹೆಚ್ಚಿಸಬೇಸಬೇಕಿದೆ ಎಂದರು.
ಸರ್ಕಾರಿ ಶಾಲೆಗೆ ಸೇರುವ ಮಕ್ಕಳಿಗೆ ಅನೇಕ ಬಿಸಿಯೂಟ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ಸರ್ಕಾರಿ ಅನುಷ್ಠಾನಗೊಳಿಸಿ ನೆರವಾಗಿದೆ. ಈ ವಿಚಾರವನ್ನು ಎಲ್ಲ ಪೋಷಕರಿಗೆ ಮನವರಿಕೆ ಮಾಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಬೇಕು. ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಶಿಕ್ಷಕರ ಸಂಘಗಳು ಕೇವಲ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕಾರ್ಯದಲ್ಲಿ ತೊಡಗಿಕೊಳ್ಳದೆ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ ಎಂದು ಹೇಳಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜೇಗೌಡ, ಬಿಆರ್‌ಸಿ ದಿನೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ವಿವಿಧ ಶಿಕ್ಷರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.
ಸಂಪಾದಕ - ರವಿ
0 Comments