ಸಾಧನೆಯ ಮೇರು‌ ಶಿಖರ ಡಾ. ಎಚ್.ಜೆ. ಲಕ್ಕಪ್ಪಗೌಡ ಅಸ್ತಂಗತ


ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿ ಹಂಪಾಪುರ ಗ್ರಾಮದ ವಿಶ್ರಾಂತ ಕುಲಪತಿ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು ಮೈಸೂರಿನಲ್ಲಿ ಸೋಮವಾರ ಇಹಲೋಕ ತ್ಯಜಿಸಿದರು.

ಹಳ್ಳಿಯಲ್ಲಿ ಜನಿಸಿ ಮೇರು ಮಟ್ಟದ ಸಾಧನೆ ಮಾಡಿದ ಪ್ರಮುಖರಲ್ಲಿ ಲಕ್ಕಪ್ಪಗೌಡರು ಅಗ್ರಮಾನ್ಯರಾಗಿದ್ದಾರೆ.

ಸಾಧನೆಯ ತುಡಿತ ಮೈಗೂಡಿಸಿಕೊಂಡಿದ್ದ ಇವರ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ತರವಾದ ಸೇವೆಗಳು ಗಮನಾರ್ಹ ಅಂಶಗಳು. ಜಾನಪದತಜ್ಞ, ಶಿಕ್ಷಣತಜ್ಞ, ಸೃಜನಶೀಲ ಸಾಹಿತಿ, ಚಿಂತಕರಾದ ಲಕ್ಕಪ್ಪಗೌಡರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನ ಹಳ್ಳಿಯಲ್ಲಿ ೧೯೩೯ ರ ಮೇ ೮ ರಂದು. ತಂದೆ ಜವರೇಗೌಡ, ತಾಯಿ ಕಾಳಮ್ಮ. ಪ್ರಾಥಮಿಕ ಶಿಕ್ಷಣ ಹುಟ್ಟಿದೂರಿನಲ್ಲಿ, ಪ್ರೌಢಶಾಲೆಗೆ ಸೇರಿದ್ದು ಬೆಟ್ಟದಪುರದ ಹೈಸ್ಕೂಲು, ಪಿ.ಯು. ಕೊಣನೂರಿನಲ್ಲಿ. ಮೈಸೂರಿನ ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎ. ಪದವಿ, ಮೈಸೂರು ವಿ.ವಿ.ದಿಂದ ಎಂ.ಎ. ಪದವಿ ಮತ್ತು ‘ಶ್ರೀ ರಾಮಾಯಣ ದರ್ಶನಂ’ ಒಂದು ವಿಮರ್ಶಾತ್ಮಕ ಅಧ್ಯಯನ’ ಮಹಾಪ್ರಬಂಧ ಮಂಡಿಸಿ ಪಡೆದ ಪಿ.ಎಚ್‌.ಡಿ. ಪದವಿ. ಹಾಸನದ ಹೊಳೆನರಸೀಪುರದಲ್ಲಿ ಪ್ರೌಢಶಾಲಾಶಿಕ್ಷಕರಾಗಿ ಬೋಧನ ಕ್ಷೇತ್ರವನ್ನೂ ಪ್ರವೇಶಿಸಿದ ನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಮತ್ತು ಮಹರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮಾನಸ ಗಂಗ್ರೋತಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ಸಲ್ಲಿಸಿದ ಸೇವೆ. ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲೂ ಕೆಲಕಾಲ ನಿರ್ವಹಿಸಿದ ಉಪನ್ಯಾಸಕರ ಹುದ್ದೆ. ಕೇಂದ್ರ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಅಧಿನಿಯಮಗಳನ್ನೂ ಕನ್ನಡಕ್ಕೆ ಭಾಷಾಂತರಿಸಲು ಕರ್ನಾಟಕ ಸರಕಾರವು ಭಾಷಾಂತರ ಇಲಾಖೆಯನ್ನು ಪ್ರಾರಂಭಿಸಿದಾಗ ಲಕ್ಕಪ್ಪಗೌಡರು ಆಯೋಗದ ಸದಸ್ಯರಾಗಿ (ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಗೋಪಿವಲ್ಲಭ ಅಯ್ಯಂಗಾರ್ಯರು ಆಯೋಗದ ಅಧ್ಯಕ್ಷರು – ಮುಳಿಯ ತಿಮ್ಮಪ್ಪಯ್ಯನವರ ಮಗ ಎಂ. ಕೇಶವಭಟ್ಟ ಮತ್ತು ಕಾನೂನು ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಪ್ರೊ. ರಂಗಯ್ಯನವರು ಸದಸ್ಯರು) ನೇಮಕಗೊಂಡರು. ಏಳು ವರ್ಷಗಳ ಕಾಲ ಆಯೋಗದಲ್ಲಿ ಕಾರ್ಯನಿರ್ವಹಿಸಿದರು. ಇವರು ಪಿ.ಯು. ಓದುತ್ತಿದ್ದಾಗಲೇ ‘ಹೆಮ್ಮೆ’ ಎಂಬ ಕವನವನ್ನೂ ಬರೆದಿದ್ದು ಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಪ್ರಕಟಗೊಂಡನಂತರ ಬರೆದ ಹಲವಾರು ಕವನಗಳ ಗೋಕುಲ ಪತ್ರಿಕೆಯಲ್ಲಿಯೂ ಪ್ರಕಟವಾಯಿತು. ನಂತರ ಪ್ರೌಢಶಾಲಾ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಪುರಂದರ ದಾಸರ ಪೂರ್ವಾಶ್ರಮವನ್ನು ಕುರಿತು ಬರೆದ ‘ತಮಸ್ಸಿನಿಂದ ಜ್ಯೋತಿಗೆ’ ಎಂಬ ನಾಟಕವನ್ನು ರಚಿಸಿದಾಗ ಸ್ನೇಹಿತರದ ರಾಮಪ್ರಸಾದ್‌ರವರು ರಂಗಕ್ಕೆ ತಂದರು. ಈ ಸಂದರ್ಭದಲ್ಲಿ ಪ್ರಕಟವಾದ ಮೊದಲ ಕವನ ಸಂಕಲನ ‘ವಸಂತಗೀತ’. ನಂತರ ಶಿವಮೊಗ್ಗದ ಬಿ.ಆರ್. ಪ್ರಾಜೆಕ್ಟ್‌ನ ಸ್ನಾತಕೋತ್ತರ ಕೇಂದ್ರದಲ್ಲಿ ರೀಡರ್ ಆಗಿ ನೇಮಕಗೊಂಡು ಬಂದ ನಂತರ ಪ್ರೊ.ಎಚ್‌. ತಿಪ್ಪೆರುದ್ರಸ್ವಾಮಿಯವರೊಡನೆ ಸೇರಿ ಜಾನಪದ ವಿಚಾರ ಸಂಕಿರಣಗಳು, ಜಾನಪದ ಕೂಮೇಳಗಳನ್ನು ನಡೆಸಿದ್ದಲ್ಲದೆ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ಅಜ್ಞಾತ ಜಾನಪದ ಕಲಾವಿದರನ್ನು ಬೆಳಕಿಗೆ ತಂದು ಕಲಾವಿದರನ್ನೂ ಸನ್ಮಾನಿಸುವ ಯೋಜನೆಯನ್ನು ಜಾರಿಗೊಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರದಂತೆ ಕುವೆಂಪು ವಿಶ್ವವಿದ್ಯಾಲಯದಲ್ಲೂ ‘ಕನ್ನಡ ಭಾರತಿ’ ಎಂದು ನಾಮಕರಣ ಮಾಡಿ ಅಧ್ಯಯನ ಕೇಂದ್ರದ ಸ್ಥಾನಮಾನಕ್ಕೆ ಅರ್ಹರಾಗುವಂತೆ ಮಾಡಿದರು. ಈ ಅವಧಿಯಲ್ಲಿ ೧೯೮೫ರಲ್ಲಿ ಶ್ರೀರಂಗರ ಸಾಹಿತ್ಯ, ಕರ್ನಾಟಕ ಜಾತ್ರೆಗಳು, ಜಾನಪದ ಮತ್ತು ಪೂರಕ ಕ್ಷೇತ್ರಗಳು, ೧೯೮೬ರಲ್ಲಿ ಸಾಹಿತ್ಯ ಮತ್ತು ಸಮಾಜವಾದಿ ಒಲವುಗಳು, ೧೯೮೭ರಲ್ಲಿ ಕನ್ನಡ ಸಾಹಿತ್ಯ ಮತ್ತು ಸಮಕಾಲೀನತೆ, ೧೯೮೯ರಲ್ಲಿ ನವಸಾಕ್ಷರರ ಸಾಹಿತ್ಯ ರಚನಾ ಕಮ್ಮಟ, ೧೯೯೦ರಲ್ಲಿ ಜಾನಪದ ಆಧುನಿಕ ಪ್ರವೃತ್ತಿಗಳು, ಬಂಡಾಯಸಾಹಿತ್ಯ ಚಳುವಳಿಗಳು ಮುಂತಾದ ವಿಷಯಗಳ ಮೇಲೆ ವಿಚಾರ ಸಂಕಿರಣ,ಕಮ್ಮಟಗಳು ನಡೆದು ‘ಕನ್ನಡ ಭಾರತಿ’ ಕಾರ್ಯಕ್ರಮಗಳನ್ನೂ ಇತರ ವಿಶ್ವವಿದ್ಯಾಲಯಗಳು ಗಮನಿಸುವಂತೆ ಮಾಡಿದರು. ಇಷ್ಟರಲ್ಲಾಗಲೇ ಪ್ರಾಧ್ಯಾಪಕರಾಗಿ ನಿಯೋಜಿತರಾಗಿದ್ರು. ೧೯೯೦ ರಿಂದ ೯೩ ರವರೆಗೆ ಕುಲಸಚಿವರಾಗಿಯೂ ದುಡಿದು ವಿಶ್ವವಿದ್ಯಾಲಯಕ್ಕೆ ಗೌರವವನ್ನೂ ತಮದು ಕೊಟ್ಟಿದ್ದಷ್ಟೇ ಅಲ್ಲದೆ ಕನ್ನಡ ಭಾರತಿಯ ನಿರ್ದೇಶಕರಾಗಿಯೂ ದುಡಿದು ೧೯೯೯ರಲ್ಲಿ ನಿವೃತ್ತರಾದರು. ಜಾನಪದ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆಯನ್ನು ಗಮನಿಸಿದ ಕರ್ನಾಟಕ ಸರಕಾರವು ‘ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಆಕಾಡಮಿ’ಯ ಅಧ್ಯಕ್ಷರಾಗಿ ೧೯೯೫ರಲ್ಲಿ ನೇಮಿಸಿತು. ಜಾನಪದ ಅಕಾಡಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲವಾರು ಯೋಜನೆಗಳನ್ನೂ ರೂಪಿಸಿ ಕಾರ್ಯಗತಗೊಳಿಸಿದರು. ಪಾಶ್ಚಾತ್ಯ ಜಾನಪದ ಸಂಶೋಧಕರ ಪರಿಚಯ ಪುಸ್ತಕಗಳು, ಸರ್ವಜ್ಞಜಾನಪದ, ಕುಮಾರ ವ್ಯಾಸಜಾನಪದ ಮೊದಲಾದ ರತ್ನತ್ರಯ ಸಂಚಿಕೆಗಳ ಪ್ರಕಟಣೆ, ಸುವರ್ಣ ಜಾನಪದ ಸಂಪುಟಗಳು, ಜಾನಪದನಿಘಂಟು, ಜಾನಪದ ವಿಶ್ವಕೋಶ ಮುಂತಾದವುಗಳ ಪ್ರಕಟಣೆ, ಜಾನಪದ ವಸ್ತು ಸಂಗ್ರಹಾಲಯಗಳ ಯೋಜನೆಯನ್ನೂ ರೂಪಿಸಿದರು. ಮುಸ್ಲಿಂ ಜಾನಪದ ಕ್ಷೇತ್ರದ ಮಹತ್ವವನ್ನು ಅರಿಯಲು ಮುಸ್ಲಿಂ ಕಟ್ಟಡ ಶೈಲಿ, ಲೋಹಶಿಲ್ಪ, ಸಾಹಿತ್ಯ, ಸಂಗೀತ, ಜಾನಪದ ಮುಂತಾದವುಗಳ ಬಗ್ಗೆ ವಿಚಾರ ಸಂಕಿರಣಗಳನ್ನೂ ಆಯೋಜಿಸಿದರು. ಕನಕಪುರದಲ್ಲಿ ‘ಜಾನಪದ ಮತ್ತು ಜಾಗತಿಕ ಪರಿಕಲ್ಪನೆ’, ಸಕಲೇಶಪುರದಲ್ಲಿ ‘ಪರಿಸರ ಜಾನಪದ’, ಬೆಂಗಳೂರಿನಲ್ಲಿ ‘ಅಖಿಲ ಕರ್ನಾಟಕ ಜಾನಪದ ಸಮಾವೇಶ’ ತುಮಕೂರಿನಲ್ಲಿ ಫ್ಲೋರ್ ಲೋರ್ ೧೫೦-ಜಾನಪದ ೩೦ (‘ಫ್ಲೋಕ್‌ಲೋರ್’ ಪದ ಸೃಷ್ಟಿಯಾಗಿ ೧೫೦ ವರ್ಷಗಳು, ‘ಜಾನಪದ’ ಪದ ಸೃಷ್ಟಿಯಾಗಿ ೩೦ ವರ್ಷಗಳಾದ ಚಾರಿತ್ರಿಕ ಸಂಗತಿಯನ್ನು ದಾಖಲಿಸಲು) ಎಂಬ ವಿಚಾರ ಸಂಕಿರಣಗಳನ್ನೂ ನಡೆಸಿದರು. ಲಕ್ಕಪ್ಪಗೌಡರು ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಅದರಲ್ಲೊಂದು ವೈಶಿಷ್ಟ್ಯತೆ ಇದ್ದೇ ಇರತ್ತಿತ್ತು. ಜಾನಪದ ಕಲಾವಿದರಿಗೆ ಪ್ರಶಸ್ತಿ ಕೊಡುವುದರ ಮೂಲಕ ಜಾನಪದ ವಿದ್ವಾಂಸರನ್ನು ಸನ್ಮಾನಿಸುವ ಪರಂಪರೆಯನ್ನೂ ಜಾನಪದ ಅಕಾಡಮಿಯ ಮೂಲಕ ಕಾರ್ಯ ರೂಪಕ್ಕೆ ತಂದು ‘ಕರ್ನಾಟಕ ಜಾನಪದ ರತ್ನ’ ಪ್ರಶಸ್ತಿ ಪ್ರದಾನವನ್ನೂ ಆರಂಭಿಸಿದರು. ಮೊದಲ ಪ್ರಶಸ್ತಿಯನ್ನು ಮರಣೋತ್ತರವಾಗಿ ಜೀ.ಶಂ. ಪರಮಶಿವಯ್ಯನವರಿಗೆ ನೀಡಿದರು. ನಾಡಿನಾದ್ಯಂತ ಇರುವ ಯುವಕಲಾವಿದರಿಗೆ ಕಲೆಯ ಬಗ್ಗೆ ತಿಳಿಸಲು ‘ಜಾನಪದ ಗಂಗ್ರೋತ್ರಿ’ ಮತ್ತು ಜಾನಪದ ಸಮಾಚಾರ ನಿಯತಕಾಲಿಕೆಗಳನ್ನು ಪ್ರಕಟಿಸತೊಡಗಿದರು. ಹೀಗೆ ಜಾನಪದ ಅಕಾಡಮಿಯ ಅಧ್ಯಕ್ಷರಾಗಿ ಜಾನಪದ ಕಲೆಯ ಮಹತ್ವವನ್ನು ತಿಳಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾದ ನಂತರ ೧೯೯೯ರಲ್ಲಿ ಇವರು ಹೊತ್ತ ಮತ್ತೊಂದು ಜವಾಬ್ದಾರಿಯುತ ಸ್ಥಾನವೆಂದರೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪದವಿ. ಇಲ್ಲು ಕೂಡಾ ಪುಸ್ತಕ ಸಂಸ್ಕೃತಿಯನ್ನು ಹರಡಲು ಕಾಲೇಜಿನಿಂದ ಕಾಲೇಜಿಗೆ, ಮನೆಯಿಂದ ಮನೆಗೆ ಪುಸ್ತಕ ಯಾತ್ರೆ, ಪುಸ್ತಕ ಸಂಸ್ಕೃತಿ, ಸಂವಾದ, ಕನ್ನಡ ಪುಸ್ತಕ ವೈವಿಧ್ಯ, ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳು, ವಿಚಾರ ಸಾಹಿತ್ಯ, ಕನ್ನಡ ಪುಸ್ತಕ ಸಂವಹನ ಮಾಧ್ಯಮಗಳು-ಹೀಗೆ ಪುಸ್ತಕ ಪ್ರಸರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು. ಚರ್ಚೆ, ಗೋಷ್ಠಿ, ಸಂವಾದ ಕಾರ್ಯಕ್ರಮಗಳು, ರಾಜ್ಯ ಮಟ್ಟದ ಪುಸ್ತಕ ಪ್ರದರ್ಶನ, ಮಾರಾಟ, ಪುಸ್ತಕ ಮಹೋತ್ಸವ ಮುಂತಾದ ಕಾರ್ಯಕ್ರಮಗಳನ್ನೂ ಕಾರ್ಯಗತಗೊಳಿಸಿದರು. ಏಕರೂಪ ಪುಸ್ತಕ ಪ್ರಕಟಣೆಗಾಗಿ ವಿಶ್ವವಿದ್ಯಾಲಯಗಳ ಪ್ರಸಾರಾಂಗದ ನಿರ್ದೇಶಕರೊಂದಿಗೆ, ಪ್ರಕಾಶಕರೊಡನೆ ಚರ್ಚಿಸಿ ಹೊಸ ಸರಣಿಯ ಪುಸ್ತಕಗಳನ್ನು ಪ್ರಕಟಿಸಿದರು. ನಂತರ ಇವರು ವಹಿಸಿಕೊಂಡ ಗುರುತರ ಜವಾಬ್ದಾರಿ ಎಂದರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನ. ಅಲ್ಲು ಕೂಡಾ ಕನ್ನಡನಾಡು-ನುಡಿಗೆ, ಸಂಸ್ಕೃತಿಗೆ, ನಾಡಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನೂ ರೂಪಿಸಿ ಕಾರ್ಯಗತಗೊಳಿಸಿದರು. ಕನ್ನಡ ಸಾಹಿತ್ಯ, ಜಾನಪದ, ಮಹಿಳಾ ಅಧ್ಯಯನಗಳಲ್ಲಿ ಎಂ.ಎ., ಪಿಹೆಚ್‌.ಡಿ., ಸಂಶೋಧನಾಧಾರಿತ ಸ್ನಾತಕೋತ್ತರ ಪದವಿ ತರಗತಿಗಳನ್ನೂ ಪ್ರಾರಂಭಿಸಿದರು. 
ಸಂಗೀತ, ದೃಶ್ಯಕಲೆ, ಶಿಲ್ಪಕಲೆಯಲ್ಲೂ ಸ್ನಾತಕೋತ್ತರ ತರಗತಿಗಳು, ಗ್ರಂಥಾಲಯಗಳು ಪ್ರಾರಂಭಮಾಡಿದವು. ಡಾ. ಶಂಬಾ ಅಧ್ಯಯನ ಪೀಠ, ಹೈದರಾಬಾದ್‌ ಕರ್ನಾಟಕ ಅಧ್ಯಯನ ಪೀಠ, ವಾಲ್ಮೀಕಿ ಅಧ್ಯಯನ ಪೀಠ, ಜೈನ ಸಂಸ್ಕೃತಿ ಅಧ್ಯಯನ ಪೀಠ. ಮುಂತಾದ ಅಧ್ಯಯನ ಪೀಠಗಳು ಪ್ರಾರಂಭವಾದವು. ಹೋದೆಡೆಯಲ್ಲೆಲ್ಲಾ ತಮ್ಮದೇ ಆದ ಛಾಪುಮೂಡಿಸಿ ವಿಶ್ವವಿದ್ಯಾಲಯ, ಅಧ್ಯಯನ ಕೇಂದ್ರ, ಸಂಸ್ಥೆಗಳನ್ನೂ ಕಟ್ಟಿ ಬೆಳೆಸಿದ್ದಲ್ಲದೆ ಮಂಗಳೂರು ಮತ್ತು ಕುವೆಂಪು ವಿ.ವಿ.ಗಳ ಶೈಕ್ಷಣಿಕ ಸಲಹೆಗಾರರಾಗಿ, ಕಲಾ ವಿಭಾಗದ ಕ್ಷೇಮಪಾಲಕರಾಗಿ, ಸಿಂಡಿಕೇಟ್‌ ಸದಸ್ಯರಾಗಿ, ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿಯಾಗಿ, ದಕ್ಷಿಣ ಭಾರತದ ಭಾಷೆಗಳ ಜಾನಪದ ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ – ಹೀಗೆ ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ದುಡಿದಿದ್ದಾರೆ. ಹೀಗೆ ಕಾಲೇಜು, ವಿಶ್ವವಿದ್ಯಾಲಯ, ಅಧ್ಯಯನ ಕೇಂದ್ರ, ಅಕಾಡಮಿ, ಪ್ರಾಧಿಕಾರ ಮುಂತಾದೆಡೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ನಿಯೋಜಿತಾರಿದ್ದು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ತಮ್ಮೆಲ್ಲ ವೇಳೆಯನ್ನು ವ್ಯಯಿಸುತ್ತಿದ್ದರೂ ದೊರೆತ ಬಿಡುವಿನ ವೇಳೆಯಲ್ಲಿ ರಚಿಸಿದ ಸಾಹಿತ್ಯ ಕೃತಿಗಳೂ ಅಪಾರ. ಕಾವ್ಯ: ವಸಂತಗೀತ, ಊರಮುಂದಿನ ಬಾವಿ, ಪದ್ದು-ಹದ್ದು, ಅಕ್ಷತೆ, ಕಿರುಗೆಜ್ಜೆ, ಸೂಜಿಸಂಪಿಗೆ, ವಚನತೋರಣ ಮೊದಲಾದ ಕೃತಿಗಳು. ಸಣ್ಣಕತೆಗಳು: ಹೊನ್ನಾರು, ಹುಲಿಯ ಹೆಜ್ಜೆ ಸಂಗ್ರಹಗಳು. ನಾಟಕ: ಸಿದ್ಧರಾಮ, ತಮಸ್ಸಿನಿಂದ ಜ್ಯೋತಿಗೆ, ಕಾಯಕಯೋಗಿ ಜೀವನಚರಿತ್ರೆ: ದಲಿತಸೂರ್ಯ, ಸಮತೆಯಶಿಲ್ಪಿ, ವಿಶ್ಚಕವಿ ಕುವೆಂಪು, ಡಾ. ಅಂಬೇಡ್ಕರ್. ಸಾಹಿತ್ಯವಿಮರ್ಶೆ: ಅಂತರಂಗ, ಸಂಗಮ, ಕಥಾಲೋಕನ, ಗೋಪುರದ ದೀಪಗಳು. ಅಂತರಾಳ, ಬಾಳದೇಗುಲದ ನೋಟಗಳು, ಸಾಹಿತ್ಯ ಬಹುಮುಖೀ ಚಿಂತನೆ. ಮಕ್ಕಳ ಸಾಹಿತ್ಯ: ಇಲಿಯಡ್‌, ಒಡಿಸ್ಸಿ, ಕಾಯಕವೇ ಕೈಲಾಸ, ದೀನ ಬಂಧು. ಸ್ವತಂತ್ರ ಗಾದೆಗಳು : ಇಬ್ಬನಿ. ಕೋಶ: ಅನ್ಯಾರ್ಥಕೋಶ. ಸಂಪಾದಿತ ಕೃತಿಗಳು: ರಸ ಋಷಿ ಕುವೆಂಪು, ಮಂಗಳಗಂಗೆ, ಸಾಧನೆಯ ಹಾದಿಯಲ್ಲಿ, ನಾಗ ಸಂಪಿಗೆ, ರಾಷ್ಟ್ರಕವಿ, ಸಿಂಗಾರ, ಗ್ರಂಥ ಸರಸ್ವತಿ, ಮುತ್ತು ಬಂದಿದೆ ಕೇರಿಗೆ, ಕನಕಭಾರತಿ, ಜನಪ್ರಿಯ ಕನಕ ಸಂಪುಟ, ಜೀಶಂಪ ಸಂಸ್ಮರಣೆ ಇಂಗ್ಲಿಷ್‌ ಕೃತಿಗಳು: ಲಿಂಗರಿಂಗ್‌ ಫ್ರಾಗ್ರೆನ್ಸ್‌, ಶ್ರೀಗಂಧ, ಎ ಬೊಕೆ ಆಫ ಫ್ಲವರ್ಸ್, ಪ್ರೈಸ್‌ಲೆಸ್‌ ಗೋಲ್ಡ್‌. ಜಾನಪದ: ಜಾನಪದ ಕಥಾವಳಿ, ಒಗಟುಗಳು, ಮಲೆನಾಡು ಜಾನಪದ,ವಿಶಿಷ್ಟ ಜಾನಪದ, ಮಲ್ಲಿಗೆಮೊಗ್ಗು ಸುರಿದಾವೆ ಮತ್ತು ಹೊಂಬಾಳೆ. ಇವುಗಳಲ್ಲದೆ ಲೇಖನಗಳ ಸಂಕಲನಗಳು, ಮುನ್ನುಡಿಗಳ ಸಂಕಲನಗಳು ಸೇರಿ ಸುಮಾರು ೭೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ೨೦೦೪ರಲ್ಲಿ ಸ್ನೇಹಿತರು, ಶಿಷ್ಯರು, ಹಿರಿಯರು ಹಾರೈಸಿ ಬರೆದು ಅರ್ಪಿಸಿದ ಅಭನಂದನ ಗ್ರಮತ ‘ಹೊನ್ನಾರು’. ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಗಳಿಗಾಗಿ ದುಡಿದ ಲಕ್ಕಪ್ಪಗೌಡರನ್ನೂ ಹುಡುಕಿಕೊಂಡು ಬಂದ ಪ್ರಶಸ್ತಿಗಳು ಹಲವಾರು. ಮೈಸೂರು ಸರಕಾರದ ದೇವರಾಜ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ವಿಶ್ವಮಾನವ ಸಾಹಿತ್ಯ ಪ್ರಶಸ್ತಿ, ಜಾನಪದ ಅಕಾಡಮಿ ಜಾನಪದ ತಜ್ಞ ಪ್ರಶಸ್ತಿ, ಶಿವಮೊಗ್ಗ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ೨೦೦೪ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಸನ ಜಿಲ್ಲೆಯ ೫ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಜಾನಪದ ಸಮ್ಮೇಳಾನಧ್ಯಕ್ಷತೆ ಮುಂತಾದಯ ಗೌರವ, ಪುರಸ್ಕಾರಗಳು ದೊರೆತಿವೆ. ಭಾಷಣ, ಬರಹ, ವಿಚಾರ ಸಂಕಿರಣ ಮುಂತಾದ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸದಾತೊಡಗಿಸಿಕೊಂಡಿರುವ ಅನನ್ಯ ಸಾಧಕರು, ಕ್ರೀಯಾಶೀಲತೆಯ ಕೊಂಡಿಯೊಂದು ಕಳಚಿದೆ.


                      ಸಂಪಾದಕ - ರವಿ

Post a Comment

0 Comments