ಅರಕಲಗೂಡು: ವಿದ್ಯಾರ್ಥಿಗಳು ಹೊಗಳಿಕೆ ತೆಗಳಿಕೆಗಳಿಗೆ ಕಿವಿಗೊಡದೆ ಸತತ ಪರಿಶ್ರಮ ವಹಿಸಿ ಉನ್ನತ ಗುರಿಯನ್ನು ಇಟ್ಟುಕೊಂಡು ಸಾಧನೆ ಮಾಡಿದಾಗ ಯಶಸ್ಸು ಸಾಧ್ಯ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ವತಿಯಿಂದ ಬುಧವಾರ ಏರ್ಪಡಿಸಿದ್ದ ಫ್ರೆಶರ್ಸ್ ಡೇ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟವಾಗಿದ್ದು ಶಿಕ್ಷಣವನ್ನು ಕಡೆಗಣಿಸಿದರೆ ಬದುಕಿನಲ್ಲಿ ಸಂಕಷ್ಟ ಅನುಭವಿಸ ಬೇಕಾಗುತ್ತದೆ.
ಉತ್ತಮ ಶಿಕ್ಷಣ ಹಾಗೂ ಜ್ಞಾನವನ್ನು ಗಳಿಸಿದಾಗ ಸಮಾಜಕ್ಕೆ ಉಪಯುಕ್ತವಾದ ಕೊಡುಗೆ ನೀಡಲು ಸುಲಭ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುನ್ನೆಡೆಯುವಂತೆ ಸಲಹೆ ಮಾಡಿದರು.
ದೇಹದ ಹೊರಗಿನ ಸೌಂದರ್ಯಕ್ಕಿಂತ ಅಂತರಂಗದ ಒಳಗಿರುವ ಮನಸ್ಸು ಮುಖ್ಯವಾಗಿದ್ದು ಅಡ್ಡದಾರಿ ಕಡೆಗೆ ಹರಿಯದಂತೆ ಸದಾ ಜಾಗೃತರಾಗಬೇಕು. ಪಾಲಕರ ನಿರೀಕ್ಷೆಗಳನ್ನು ಹುಸಿಗೊಳಿಸದೆ ಭಕ್ತಿ ಶ್ರದ್ಧೆಯಿಂದ ಕಲಿತು ಬದುಕಿನ ಪರೀಕ್ಷೆ ಎದುರಿಸಬೇಕು. ಆಗ ಮಾತ್ರ ಭವಿಷ್ಯ ಉಜ್ವಲಗೊಳ್ಳಲಿದ್ದು ಸಂಸಾರದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಮಾಜಕ್ಕೆ ಬೆಳಕಾಗಬಹುದು ಎಂದರು.
ಬಿಜಿಎಸ್ ಸಂಸ್ಥೆ ತಂತ್ರಜ್ಞಾನ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಡಾ. ಇ.ಎಸ್. ಚಕ್ರವರ್ತಿ ಮಾತನಾಡಿ, ಇಂಜಿನಿಯರ್ ಮತ್ತು ಮೆಡಿಕಲ್ ಮಾತ್ರವಲ್ಲದೆ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲೂ ವಿಫುಲ ಅವಕಾಶಗಳಿವೆ. ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಿದರೆ ಉನ್ನತ ಜ್ಞಾನ ಗಳಿಸಬಹುದು. ಗುರುಗಳು, ಹಿರಿಯಯರು ಹಾಗೂ ಪೋಷಕರನ್ನು ಗೌರವಿಸುವ ಜತೆಗೆ ವಿನಯವಂತಿಕೆಯನ್ನು ಮೈಗೂಡಿಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಆದಿ ಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಪಪಂ ಉಪಾಧ್ಯಕ್ಷೆ ಎಚ್. ಎಸ್. ರಶ್ಮಿ ಮಂಜುನಾಥ್, ಪ್ರಾಂಶುಪಾಲ ಮಹೇಶ್ ಹೊಡೆನೂರು, ಉಪನ್ಯಾಸಕರು ಉಪಸ್ಥಿತರಿದ್ದರು.
ಕಳೆದ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಹಾಗೂ ನೀಟ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.
0 Comments