ಅರಕಲಗೂಡು: ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ನನಗೆ 55 ಸಾವಿರ ಮತಗಳನ್ನು ನೀಡಿ ಮತದಾರರು ರಾಜ್ಯ ಮಟ್ಟದಲ್ಲಿ ಗುರುತಿಸುವಂತಹ ಇತಿಹಾಸ ಸೃಷ್ಟಿಸಿದ್ದು ಸೋಲಿನಿಂದ ಧೃತಿಗೆಡಲಾರೆ ಎಂದು ಪರಾಜಿತ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಹೇಳಿದರು.
ತಾಲೂಕಿನ ರಾಮನಾಥಪುರದ ಸ್ವಾಗತ್ ಕನ್ವೆಷನ್ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೊಣನೂರು ಮತ್ತು ರಾಮನಾಥಪುರ ಹೋಬಳಿ ಬೆಂಬಲಿಗರ ಆತ್ಮಾವಲೋಕನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕುಟುಂಬ ಅಪಾರ ವರ್ಷಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುವ ಮೂಲಕ ಜನಸೇವೆ ಮಾಡುತ್ತಾ ಬಂದಿದೆ. ಹಲವಾರು ವರ್ಷಗಳಿಂದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರೂ ಕ್ಷೇತ್ರದ ಅಭಿವೃದ್ಧಿ ಹಿತ ದೃಷ್ಟಿಯಿಂದ ಜನರ ಒತ್ತಾಸೆ ಮೇರೆಗೆ ಚುನಾವಣೆಗೆ ಸ್ಪರ್ಧಿಸಬೇಕಾಯಿತು ಎಂದರು.
ಕ್ಷೇತ್ರದಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದರೂ ಎಲ್ಲ ಸಮುದಾಯದ ಮತದಾರರು ನನಗೆ 55 ಸಾವಿರ ಮತಗಳನ್ನು ನೀಡಿ ದಾಖಲೆ ನಿರ್ಮಿಸಿದ್ದಾರೆ. ರಾಜಕಾರಣದಲ್ಲಿ ನಾನು ಯಾರೊಂದಿಗೂ ದ್ವೇಷದ ರಾಜಕೀಯ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೊಂದಿಗೆ ಕೈಜೋಡಿಸುವುದಾಗಿ ತಿಳಿಸಿದರು.
ರಾಜಕೀಯವಾಗಿ ಮುಂದಿನ ದಿನಗಳಲ್ಲಿ ಎಲ್ಲರ ಅಭಿಪ್ರಾಯ ಪಡೆದು ಒಟ್ಟಿಗೆ ಸಾಗೋಣ. ಕಾರ್ಯಕರ್ತರು ಮತ್ತು ಬೆಂಬಲಿಗರು ಚುನಾವಣೆಯಲ್ಲಿನ ಅನಿರೀಕ್ಷಿತ ಸೋಲಿಗೆ ಎದೆಗುದಂದೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಸಿ.ಡಿ. ದಿವಾಕರಗೌಡ, ಎ.ಡಿ. ಚಂದ್ರಶೇಖರ್, ಎಚ್.ಎಸ್. ಶಂಕರ್, ಎಸ್.ಜೆ. ದೊಡ್ಡೇಗೌಡ, ರಾಮೇಗೌಡ, ಎಲ್.ಬಿ. ಕೃಷ್ಣ, ಸುಬ್ರಹ್ಮಣ್ಯ, ಎನ್. ರವಿಕುಮಾರ್, ಮಧುಕರ್, ಗೋವಿಂದ, ದೇವರಾಜೇಗೌಡ, ರವೀಂದ್ರ, ಸಂಜೀವೇಗೌಡ ಇತರರಿದ್ದರು.
0 Comments