ರಾಜಕೀಯದಿಂದ ಹಿಂದೆ ಸರಿಯುವ ಜಾಯಮಾನ ನನ್ನದಲ್ಲ, ಜನರೊಂದಿಗಿರುವೆ: ಎಂ.ಟಿ.ಕೃಷ್ಣೇಗೌಡ

ಅರಕಲಗೂಡು: ವಿಧಾನಸಭಾ ಚುನಾವಣೆ ಸೋಲಿಗೆ ದೃತಿಗೆಟ್ಟು ಮನೆಯಲ್ಲಿ ಕೂರದೆ ಜನರೊಂದಿಗಿದ್ದು ಸಂಘಟನೆ ಬಲಪಡಿಸುವೆ, ವಿರೋಧಿಗಳ ಮಾತಿಗೆಲ್ಲ ತಲೆಕೆಡಿಸಿಕೊಂಡು ಹಿಂದೆ ಸರಿಯುವ ಜಾಯಮಾನ ನನ್ನದಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿದ್ದ ಮುಖಂಡ ಎಂ.ಟಿ. ಕೃಷ್ಣೇಗೌಡ ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಎಂ. ಟಿ. ಕೃಷ್ಣೆಗೌಡ ಅಭಿಮಾನಿ ಬಳಗ ಆಯೋಜಿಸಿದ್ದ ಕಸಬಾ, ದೊಡ್ಡಮಗ್ಗೆ, ಮಲ್ಲಿಪಟ್ಟಣ ಹೋಬಳಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ನಾನು 4 ವರ್ಷದಿಂದ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಪಕ್ಷ ಕಟ್ಟಿದೆ. ಬೇರೆಯವರಂತೆ ಚುನಾವಣೆ 3 ತಿಂಗಳು ಇರುವಂತೆ ಪಕ್ಷಕ್ಕೆ ಬರಲಿಲ್ಲ. ನಾನು ಪ್ರಾಮಾಣಿಕವಾಗಿ ಪಕ್ಷ ಕಟ್ಟಿದೆ. ಆದರೆ ಕಾಂಗ್ರೆಸ್ ನನಗೆ ಟಿಕೆಟ್ ನೀಡದೆ ವಂಚಿಸಿತು. ಪಕ್ಷೇತರವಾಗಿ ಸ್ಪರ್ಧೆಸಿದೆ. ಈ ವೇಳೆ ಪಕ್ಷದಲ್ಲಿದ್ದ ನಿಷ್ಠಾವಂತ ಮುಖಂಡರು ನನಗೆ ಸಹಕಾರ ನೀಡಿದರು. ಹಾಗಾಗಿ ಒತ್ತಡ ಹೇರಿ ಕೆಪಿಸಿಸಿಯಿಂದ ಸಹಕಾರ ನೀಡಿದವರೆಲ್ಲರೂ ಉಚ್ಛಟನಾ ಪತ್ರ ಕಳುಹಿಸುತ್ತಾರೆಂದರೆ ಕಾಂಗ್ರೆಸ್ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಯೋಚಿಸುವ ಪರಿಸ್ಥಿತಿ ಇದೆ ಎಂದು ಹೇಳಿದರು.

ಕ್ಷೇತ್ರದಲ್ಲಿ 40 ವರ್ಷದಿಂದ ರಾಜಕೀಯ ಮಾಡಿದರು ತಾಲೂಕನ್ನು ಅಭಿವೃದ್ಧಿ ಮಾಡಲಾಗಿಲ್ಲ. ತಾಲೂಕನ್ನು ಅಭಿವೃದ್ಧಿ ಮಾಡಬೇಕೆಂದು ರಾಜಕೀಯಕ್ಕೆ ಬಂದಿದ್ದೇನೆ ವಿನಃ ಬೇರೆ ಉದ್ದೇಶವಿಲ್ಲ. ಈ ವೇಳೆಗಾಗಲೇ ತಾಲೂಕಲ್ಲಿ 4-5 ಏತನೀರಾವರಿಗಳಿದ್ದು ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ಒದಗಿಸಬೇಕಿತ್ತು. ಆ ಕೆಲಸವಾಗಿಲ್ಲ. ಮುಂದಿನ ದಿನದಲ್ಲಿ ತಾಲೂಕು ಅಭಿವೃದ್ಧಿಗೆ ನನ್ನೊಂದಿಗೆ ಕೈ ಜೋಡಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಪಟ್ಟಣದ ಹೃದಯಭಾಗದಲ್ಲಿರುವ ಹಳೆ ಬಸ್ ನಿಲ್ದಾಣದಲ್ಲಿ ಸಾಕಷ್ಟು ಜಾಗವಿದ್ದು, ಅದನ್ನು ಮಳಿಗೆ ಮಾಡಿದರೆ ವ್ಯಾಪಾರಸ್ಥರಿಗೆ ತುಂಬಾ ಅನುಕೂಲವಾಗುತ್ತದೆ. ಅದರ ಬಗ್ಗೆ ಆಸಕ್ತಿಯೇ ಇಲ್ಲ. ಮುಂದಾದರೂ ತಾಲೂಕಿನ ಅಭಿವೃದ್ಧಿ ಬಗ್ಗೆ ಗಮನ ಹರಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಮಾಜಿ ಜಿಪಂ ಸದಸ್ಯ ಎ.ಡಿ.ಚಂದ್ರಶೇಖರ್ ಮಾತನಾಡಿ, ರಾಜ್ಯದಲ್ಲೇ ಪಕ್ಷೇತರ ಅಭ್ಯರ್ಥಿಗಳಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ಎಂದರೆ ಕೃಷ್ಣೆಗೌಡರು ಮಾತ್ರ. ಹಾಗಾಗಿ ಸೋಲನ್ನು ಒಪ್ಪಲು ಸಾಧ್ಯವಿಲ್ಲ. ನೈತಿಕವಾಗಿ ಗೆಲುವು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೃಷ್ಣೆಗೌಡರು ಕಾರ್ಯಕರ್ತರು, ಮುಖಂಡರನ್ನು ಗಮನದಲಿಟ್ಟುಕೊಂಡು ಏನೇ ತೀರ್ಮಾನ ತೆಗೆದುಕೊಂಡರು ನಾವೆಲ್ಲ ಅವರೊಂದಿಗೆ ಇರುತ್ತೇವೆ ಎಂದು ಹೇಳಿದರು.

ಮುಖಂಡ ಕಳ್ಳಿಮುದ್ದನಹಳ್ಳಿ ಲೋಕೇಶ್ ಮಾತನಾಡಿ, ಕ್ಷೇತ್ರದ  ಮತದಾರರ ಒಲವು ನಮ್ಮ ಪರ ವ್ಯಕ್ತವಾಗಿದ್ದು ಸ್ವತಃ ಕೃಷ್ಣೇಗೌಡ ಅವರು ಗ್ರಾಪಂ ಮಟ್ಟದಲ್ಲಿ ಸಂಘಟನೆಗೆ ಮತ್ತಷ್ಟು ಶ್ರಮ ವಹಿಸಬೇಕು ಎಂದರು.

ವೀರಶೈವ ಮಹಾಸಭಾದ ರವಿಕುಮಾರ್, ಮುಖಂಡರಾದ ಗೇಟ್ ವೆಂಕಟೇಶ್, ದೇವರಾಜೇಗೌಡ, ಬಸವರಾಜು, ಜಮೀರ್, ರಂಗಸ್ವಾಮಿ, ರಾಮೇಗೌಡ, ಪರಮೇಶ್ ಬಸವನಹಳ್ಳಿ, ನಿಲುವಾಗಿಲು ಕೃಷ್ಣ, ನಿವೃತ್ತ ಶಿಕ್ಷಕ ದ್ಯಾವಯ್ಯ ಇತರರಿದ್ದರು.

Post a Comment

0 Comments