ಅರಕಲಗೂಡು: ಎ. ಮಂಜು ಜತೆ ನೊಂದು ಬಂದಿದ್ದೆನೆ, ಅವರಿಗೆ ವೈಯಕ್ತಿಕವಾಗಿ ನನ್ನ ಸಹಾಯ ಎಷ್ಡಿದೆ ಎಂದು ಜನತೆಗೆ ಗೊತ್ತು, ಅವರ ಹಿಂಬಾಲಕರ ತೇಜೋವದೆಗೆ ಜಗ್ಗಲ್ಲ ಎಂದು ಗುಡುಗಿದ ಸಿಂಗನಕುಪ್ಪೆ ಸುರೇಶ್.. ಅಲ್ಲಾದ ಮಾನಸಿಕ ಯಾತನೆ ನೋವು ಅಘಾತಕಾರಿ ಸಂಗತಿಗಳನ್ನು ಬೆಂಬಲಿಗರೊಂದಿಗೆ ಬಿಚ್ಚಿಟ್ಟಿದ್ದು ಕೆಲವು ರಾಜಕಾರಣಿಗಳ ಮತ್ತೊಂದು ಮುಖವನ್ನು ಬಯಲುಗೊಳಿಸಿತು.
ಮಾಜಿ ಸಚಿವ ಎ. ಮಂಜು ಅವರ ಬಲಗೈ ಬಂಟ ಉದ್ಯಮಿ ಸಿಂಗನಕುಪ್ಪೆ ಸುರೇಶ್ ಅವರು ಪಕ್ಷೇತರ ಅಭ್ಯರ್ಥಿ ಕೃಷ್ಣೆಗೌಡರಿಗೆ ಬೆಂಬಲ ಸೂಚಿಸಿದ್ದಾರೆ.
ಮಂಜಣ್ಣ ಅವರ ಹಿಂಬಾಲಕರು ಪ್ರತಿ ಹೆಜ್ಜೆಯಲ್ಲೂ ನನ್ನನ್ನು ತೇಜೋವದೆ ಮಾಡುತ್ತಿದ್ದರಿಂದ ಮನನೊಂದು ಪಕ್ಷೇತರ ಅಭ್ಯರ್ಥಿ ಕೃಷ್ಣೆಗೌಡರಿಗೆ ಬೆಂಬಲ ನೀಡುತ್ತಿರುವುದಾಗಿ ಉದ್ಯಮಿ ಸಿಂಗನಕುಪ್ಪೆ ಸುರೇಶ್ ತಿಳಿಸಿದ್ದಾರೆ.
ಮಲ್ಲಿಪಟ್ಟಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾನೊಬ್ಬ ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತ. ಆದರೆ, ಕೆಲವು ದಿನಗಳಲ್ಲಿ ನಡೆದ ಘಟನೆಗಳಿಂದ ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸುತ್ತಿದ್ದೇನೆ. ನನ್ನನ್ನು ಉಪಯೋಗಿಸಿಕೊಂಡು ಕಾಸಾ ಬಿಸಾಡಿದಂತೆ ನನ್ನ ಬಿಸಾಡಿದ್ದಾರೆ ಎಂದಾಗ ಕಣ್ಣೀರಿನ ಹನಿಗಳು ಜಿನುಗಿದವು.
ಮಂಜಣ್ಣ ಅವರು ಕಾರ್ಯಕ್ರಮ ಮಾಡುವಾಗ ಬ್ಯಾನರ್ ಕಟ್ಟಲು ಯಾರೊಬ್ಬರೂ ಇರಲಿಲ್ಲ. ಈ ವೇಳೆ ಅವರಿಗೆ ಬೂಸ್ಟರ್ ಆಗಿ ನಿಂತು ನಿಷ್ಠಾವಂತನಾಗಿ ಇದುವರೆಗೆ ಕೆಲಸ ಮಾಡಿದ್ದೇನೆ. ಇಂದು ನನ್ನನ್ನು ಕೇವಲವಾಗಿ ನೋಡುತ್ತಿದ್ದಾರೆ. ಇದನ್ನು ಮಂಜಣ್ಣ ಅಥವಾ ಅವರ ಹಿಂಬಾಲಕರು ಮಾಡುತ್ತಿದ್ದರೋ ಗೊತ್ತಿಲ್ಲ ಎಂದರು.
ನಾನು ರಾಜಕೀಯ ಜೀವನಕ್ಕೆ ಪ್ರವೇಶಿಸುವ ಮೊದಲು ಕೃಷ್ಣೆಗೌಡರನ್ನು ಭೇಟಿ ಮಾಡಿ ಯಾವ ಪಕ್ಷಕ್ಕೆ ಹೋಗೋಣವೆಂದು ಚರ್ಚಿಸಿದ್ದೆ. ಈ ವೇಳೆ ಕೃಷ್ಣೆಗೌಡರು ತಾಳ್ಮೆಯಿಂದ ಇರು ಎಂದಿದ್ದರು. ಹಾಗಿದ್ದರೆ ಸರಿಯಾಗಿತ್ತು. ನಾನು ವೇಗವಾಗಿ ಹೋಗಿ ಎಡವಿದೆ. ಎಲ್ಲಿ ಎಡವಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.
ಮೊನ್ನೆ ನಡೆದ ಜೆಡಿಎಸ್ ಕಾರ್ಯಕ್ರಮಕ್ಕೆ ಬಂದಿದ್ದವರ ವಾಹನ ಅಪಘಾತವಾಗಿ 23 ಜನಕ್ಕೆ ಪೆಟ್ಟುಬಿದ್ದಿದ್ದು, ಅವರನ್ನು ಕರೆದುಕೊಂಡು ಹೋಗಿ ಕೆಲವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆ, ಮತ್ತೆ ಕೆಲವರನ್ನು ಹಾಸನ, ಬೆಂಗಳೂರಿಗೆ ಕರೆದುಕೊಂಡು ಹೋಗಿ ಸ್ವಂತ ಹಣದಲ್ಲಿ ಚಿಕಿತ್ಸೆ ಕೊಡಿಸಿದೆ. ಬಳಿಕ ಮಂಜಣ್ಣ ಅವರಿಗೆ 25 ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಬಳಿಕ ಅವರ ಗನ್ ಮನ್ ಗೆ ಕರೆ ಮಾಡಿದಾಗ ಮಾಡುತ್ತಾರೆಂದು ಹೇಳಿದರು. ಆದರೂ ಮಾಡಲಿಲ್ಲ. ಚಿಕಿತ್ಸೆ ಎಲ್ಲಾ ಕೊಡಿಸಿದ ಬಳಿಕ ಮಂಜಣ್ಣ ಕರೆ ಮಾಡಿದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ನಾನು ಯಾರಿಂದಲೂ ಹಣಪಡೆಯದೇ ಸ್ವಂತ ಹಣದಿಂದ ಹಲವು ಕಾರ್ಯಗಳನ್ನು ಮಾಡಿದ್ದೇನೆ ಎಂದರು.
ನಿನ್ನೆ ವಾಟ್ಸಾಪ್, ಫೇಸ್ಬುಕ್ ನಲ್ಲಿ ಸಿಂಗನಕುಪ್ಪೆ ಸುರೇಶ್ ಅವರು ಮಂಜಣ್ಣ ಅವರ ಹಣ ಪಡೆದು ಫೋನ್ ಸ್ವಿಚ್ ಆಫ್ ಮಾಡಿ ಬೆಂಗಳೂರಿಗೆ ಹೋಗುತ್ತಿದ್ದಾರೆ ಎಂದು ಬರೆದಿದ್ದರು. ನಾನು ಯಾವುದೇ ಹಣ ಪಡೆದಿಲ್ಲ. ಅವರ ಹಿಂಬಾಲಕರ ತೇಜೋವದೆಯಿಂದ ಮನನೊಂದು ಕೃಷ್ಣಣ್ಣ ಅವರೊಂದಿಗೆ ಕೈಜೋಡಿಸುತ್ತಿದ್ದೇನೆ. ಆದರೆ, ಕೆಲವರು 10, 15 ಕೋಟಿಗೆ ಡೀಲ್ ಆಗಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಅದನ್ನು ಸಾಬೀತುಪಡಿಸಿದರೆ ದೊಡ್ಡಮ್ಮ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ದನಿದ್ದೇನೆ. ದಯವಿಟ್ಟು ವಾಟ್ಸಾಪ್, ಫೇಸ್ಬುಕ್ ನಲ್ಲಿ ತೇಜೋವದೆ ಮಾಡಬೇಡಿ. ಸಮಾಜಕ್ಕೆ ಒಳ್ಳೆ ಕೆಲಸ ಮಾಡುತ್ತಿರುವ ಕೃಷ್ಣೆಗೌಡ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಪಕ್ಷೇತರ ಅಭ್ಯರ್ಥಿ ಕೃಷ್ಣೆಗೌಡ, ಮುಖಂಡರಾದ ಡಾ. ದಿನೇಶ್ ಬೈರೇಗೌಡ, ದಿವಾಕರ್ ಗೌಡ, ಅಣ್ಣೇಗೌಡ, ಸುಬ್ಬಣ್ಣ, ರಂಗಸ್ವಾಮಿ, ಎಂ.ಆರ್. ಮಂಜುನಾಥ್, ರಾಜೇಗೌಡ, ದೇವರಾಜೇಗೌಡ, ಕಳ್ಳಿ ಮುದ್ದನಹಳ್ಳಿ ಲೋಕೇಶ್ ಮತ್ತಿತರೆ ಮುಖಂಡರು ಹಾಜರಿದ್ದರು
0 Comments