ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣದಲ್ಲಿ ಸೋಮವಾರ ಸಮಾಜ ಸೇವಕ ಸುರೇಶ್ ಸಿಂಗನಕುಪ್ಪೆ ಅವರು ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಅವರನ್ನು ಬೆಂಬಲಿಸಿ ಸ್ವಾಭಿಮಾನಿ ಪಕ್ಷಕ್ಕೆ ಸೇರ್ಪಡೆಯಾದರು.
ಮಲ್ಲಿಪಟ್ಟಣದ ಸಂದೀಪ್ ಕಲ್ಯಾಣ ಮಂಟಪದಲ್ಲಿ ಸ್ವಾಭಿಮಾನಿ ಪಕ್ಷ ಸೇರ್ಪಡೆಯಾಗಿ ಮಾತನಾಡಿದ ಸುರೇಶ್ ಸಿಂಗನಕುಪ್ಪೆ ಅವರು, ಕಳೆದೆರಡು ವಾರಗಳಿಂದ ಜೆಡಿಎಸ್ ನಲ್ಲಿ ಉಸಿರುಗಟ್ಟುವ ವಾತಾವರಣ ಇತ್ತು. ಎ. ಮಂಜು ಹಿಂಬಾಲಕರು ರಾಜಕೀಯವಾಗಿ ನನ್ನ ತೇಜೋವದೆಗೆ ಮುಂದಾದರು.
ಕಳೆದ ವಾರ ಅರಕಲಗೂಡಿನಲ್ಲಿ ನಡೆದ ಜೆಡಿಎಸ್ ಸಮಾವೇಶಕ್ಕೆ ಬಂದಿದ್ದ ವಾಹನ ಪಲ್ಟಿಯಾಗಿ ಹಲವರಿಗೆ ಪೆಟ್ಟು ಬಿದ್ದಿತ್ತು. ಗಾಯಾಳುಗಳಿಗೆ ನನ್ನ ವೈಯಕ್ತಿಕ ಹಣದಲ್ಲಿ ಚಿಕಿತ್ಸೆ ಕೊಡಿಸಿದೆ. ಎ. ಮಂಜು ಅವರಿಗೆ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸದೆ ಆಸ್ಪತ್ರೆಗೂ ಬಾರದೆ ನಿರ್ಲಕ್ಷ್ಯಿಸಿದರು. ಎ. ಮಂಜು ಮತ್ತವರ ಹಿಂಬಾಲಕರ ಮಾನಸಿಕ ಹಿಂಸೆ ಸಹಿಸಲಾಗದೆ ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದೆ. ಚುನಾವಣೆ ಇನ್ಮೆರಡು ದಿನಗಳಿರುವಾಗ ಈ ರೀತಿಯ ರಾಜಕೀಯ ವಿದ್ಯಾಮಾನಗಳಿಂದ ನನ್ನ ಬೆಂಬಲಿಗರಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಗದ್ಗದಿತರಾದರು.
ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಡ ಮಕ್ಕಳ ಶಿಕ್ಷಣ,ಆರೋಗ್ಯಕ್ಕೆ ಹಾಗೂ ಶಾಲೆಗಳ ಉನ್ನತಿಗೆ ಸಹಾಯ ಮಾಡಿದ್ದೇನೆ. ಎ. ಮಂಜು ಅವರ ಆಪ್ತರಾಗಿ ಗುರುತಿಸಿಕೊಂಡು ಕಾರ್ಯಕರ್ತರನ್ನು ಸಂಘಟಿಸಿ ನಿಷ್ಢಾವಂತನಾಗಿ ದುಡಿದರೂ ನನ್ನನ್ನು ಬೀದಿ ಕಸದ ರೀತಿ ಕಂಡರು. ನಾನು ಮೊದಲಿಗೆ ರಾಜಕೀಯ ಪ್ರವೇಶ ಮಾಡಬೇಕೆಂದಾಗ ಕೃಷ್ಣೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೆ. ಆಗ ತಾಳ್ಮೆಯಿ.ದ ಇರಲು ಹೇಳಿದ್ದರೂ ನಾನು ಎ. ಮಂಜು ಜೊತೆ ಹೋಗಿ ತಪ್ಪು ಮಾಡಿದೆ. ಕೃಷ್ಣೇಗೌಡರ ನಾಯಕತ್ವ ಹಾಗೂ ಅವರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಸ್ವಾಭಿಮಾನಿ ಪಕ್ಷ ಸೇರುತ್ತಿದ್ದೇನೆ. ಇದರಿಂದಾಗಿ ಕೆಲವು ವಿರೋಧಿಗಳು ಆಮೀಷಕ್ಕಾಗಿ ಕೃಷ್ಣೇಗೌಡ ಅವರನ್ನು ಬೆಂಬಲಿಸುತ್ತಿರುವುದಾಗಿ ನನ್ನ ತೇಜೋವದೆ ಮಾಡುತ್ತಿದ್ದಾರೆ. ಈ ಬಗ್ಗೆ ವಿರೋಧಿಗಳು ಬಂದು ದೊಡ್ಡಮ್ಮ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಲಿ ನಾನು ಸಿದ್ದನಿದ್ದೆನೆ ಎಂದು ಸವಾಲು ಹಾಕಿದರು.
ನನ್ನ ಎಲ್ಲ ಬೆಂಬಲಿಗರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಮುಂದೆ ನನ್ನನ್ನು ಕಡೆಗಣಿಸಬೇಡಿ ಎಂದು ಕೃಷ್ಣೇಗೌಡರ ಅವರಲ್ಲಿ ಮನವಿ ಮಾಡಿದರು.
ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಮಾತನಾಡಿ, ಸುರೇಶ್ ಸಿಂಗನಕುಪ್ಪೆ ಸೇರ್ಪಡೆಯಿಂದಾಗಿ ಆನೆ ಬಲ ಬಂದಂತಾಗಿದ್ದು ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ದಿವಾಕರ್ ಗೌಡ ಹಾಗೂ ಡಾ. ದಿನೇಶ್ ಭೈರೇಗೌಡ ಅವರಿಂದ ಹೆಚ್ಚಿನ ಶಕ್ತಿ ಬಂದಿದೆ. ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಡಾ. ದಿನೇಶ್ ಭೈರೇಗೌಡ, ದಿವಾಕರ್ ಗೌಡ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಮುಖಂಡರಾದ ಅಣ್ಣೇಗೌಡ, ಬಾಗ್ದಾಳ್ ಕಾಂತರಾಜು, ಎಂ.ಆರ್. ಮಂಜುನಾಥ್, ಮಾಗಲು ಬಸವರಾಜು, ಸುಬ್ಬಣ್ಣ, ದೇವರಾಜೇಗೌಡ, ಕಳ್ಳಿಮುದ್ದನಹಳ್ಳಿ ಲೋಕೇಶ್ ಇತರರಿದ್ದರು.
0 Comments