ಅರಕಲಗೂಡು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಪರಿಸರ ಬೆಳೆಸುವ ನಿಟ್ಟಿನಲ್ಲಿ ಟೈಮ್ಸ್ ವಿದ್ಯಾಸಂಸ್ಥೆ ಸಮೂಹ ಗಿಡಗಳನ್ನು ವಿತರಿಸುವ ಪುಣ್ಯದ ಕಾಯಕ ಕೈಗೊಂಡಿರುವುದು ಶ್ಲಾಘನೀಯ ಸಂಗತಿ ಎಂದು ಶಾಸಕ ಎ. ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಾಸನ ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಟೈಮ್ಸ್ ಹಸಿರು ಸಿರಿ ಸಸ್ಯೋತ್ಸವದಲ್ಲಿ ಹತ್ತು ಸಾವಿರ ಗಿಡಗಳ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಕುಲದ ಉಳಿವಿಗೆ ಪರಿಸರ ಬೆಳೆಸುವುದು ಅನಿವಾರ್ಯವಾಗಿದೆ. ಹೀಗಾಗಿ ಓದಿನ ಸಮಯದಲ್ಲೇ ಮಕ್ಕಳಿಗೆ ಶಿಕ್ಷಣದಷ್ಟೆ ಪರಿಸರಕ್ಕೂ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು.
ಪಕ್ಷಿಗಳಿಗೆ ಆಹಾರ ಒದಗಿಸಲು ಹೆಚ್ಚಿನದಾಗಿ ಹಣ್ಣಿನ ಮರಗಳನ್ನು ಬೆಳೆಸಬೇಕು. ರೈತಾಪಿ ವರ್ಗದ ಜನರು ಗಿಡಗಳನ್ನು ಬೆಳೆಸಿ ಆರ್ಥಿಕವಾಗಿ ಲಾಭ ಮಾಡಿಕೊಳ್ಳಬೇಕು. ಪರಿಸರಕ್ಕೆ ಪ್ರೋತ್ಸಾಹದಾಯಕವಾದ ಈ ಸಂಸ್ಥೆಯ ಸಮಾಜಮುಖಿ ಸೇವೆ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.
ಟೈಮ್ಸ್ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಪರಿಸರ ಉಳಿದರೆ ಭೂಮಿ ಉಳಿಯಲಿದೆ. ರೈತರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಉನ್ನತ ಶಿಕ್ಷಣ, ಪರಿಸರ ಬೆಳೆಸುವ ಕಾರ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಬಿಇಒ ಕೆ.ಪಿ. ನಾರಾಯಣ್ ಮಾತನಾಡಿ, ವಿದ್ಯಾರ್ಥಿಗಳು ನೆಟ್ಟ ಗಿಡಗಳ ಪಾಲನೆ ಪೋಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ವಲಯ ಅರಣ್ಯಾಧಿಕಾರಿ ಯಶ್ಮ ಮಾಚಮ್ಮ, ಕಾಲೇಜು ಪ್ರಾಂಶುಪಾಲ ನವೀನ್ ಪಿ. ಉಲಿವಾಲ, ಉಪನ್ಯಾಸಕ ನವೀನ್, ಪ್ರಶಾಂತ್, ರೋಟರಿ ಕ್ಲಬ್ ಅಧ್ಯಕ್ಷ ವಿಜಯ್ ಕುಮಾರ್, ಕರ್ಣಾಟಕ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಜಯಾನಂದ ದೇವಾಡಿಗ ಇತರರು ಇದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಶಾಸಕ ಎ. ಮಂಜು ಗಿಡಿಗಳನ್ನು ವಿತರಿಸಿದರು.
0 Comments