ಅರಕಲಗೂಡು: ಪಟ್ಟಣದ ನಿವಾಸಿಗಳು ಚುನಾವಣೆಯಲ್ಲಿ ನನಗೆ ಆಶೀರ್ವದಿಸಿದರೆ ಪಪಂ ಮೇಲ್ದರ್ಜೆಗೆ ಏರಿಸಿ ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಬಡಾವಣೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಅರಕಲಗೂಡು ಅಭಿವೃದ್ಧಿ ವೇಗ ಹೆಚ್ಚಿಸುವೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ತಿಳಿಸಿದರು.
ಪಟ್ಟಣದಲ್ಲಿ ವಾರದ ಸಂತೆಯ ದಿನವಾದ ಶುಕ್ರವಾರ ದಿನವಹಿ ಮಾರುಕಟ್ಟೆ ಪ್ರದೇಶ ಸೇರಿದಂತೆ ಸಿ.ಡಿ. ದಿವಾಕರ್ ಗೌಡ ಇನ್ನೂ ಹಲವಾರು ಮುಖಂಡರು, ಕಾರ್ಯಕರ್ತರು ಒಗ್ಗೂಡಿ ಹಲವೆಡೆ ಮತ ಪ್ರಚಾರ ಕಾರ್ಯ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಲಭ್ಯಗಳಿಲ್ಲದ ಸಂತೆ ಮಾರುಕಟ್ಟೆಯಲ್ಲಿ ಮಳೆ ಬಂದರೆ ವ್ಯಾಪಾರಿಗಳ ಪಜೀತಿ ಅಷ್ಟಿಷ್ಟಲ್ಲ. ಇಪ್ಪತ್ತು ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದ ಬಡಾವಣೆಗಳಿಗೆ ಇದುವರೆಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿರುವುದು ನೋವಿನ ಸಂಗತಿ.
ಹಲವಾರು ವಾರ್ಡ್ ಗಳು, ಜನವಸತಿ ಪ್ರದೇಶಗಳಲ್ಲಿ ಮೂಲಸೌಕರ್ಯ ಗಳ ಕೊರತೆ ನೀಗಿಸಿಲ್ಲ. ಹಳೇ ಬಸ್ ನಿಲ್ದಾಣ ಅಭಿವೃದ್ಧಿ ಕಾಣದೆ ಗಬ್ಬೆದ್ದು ಹಾಳಾಗಿದೆ. ಶಿಕ್ಷಣ, ಆರೋಗ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಸೇರಿದಂತೆ ಬಡ ವರ್ಗದ ಜನರ ಆರ್ಥಿಕ ಏಳಿಗೆಗೆ ಆದ್ಯತೆ ನೀಡುತ್ತೇನೆ. ಪುರಸಭೆಯಾಗಿ ಮೇಲ್ದರ್ಜೆಗೇರದ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮತದಾರರು ಪಕ್ಷಬೇಧ ಮರೆತು ಚುನಾವಣೆಯಲ್ಲಿ ನನಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸೇರ್ಪಡೆ: ಬೆಳಗ್ಗೆ ವೀರಶೈವ ಮಹಾಸಭಾ ಅಧ್ಯಕ್ಷ ರವಿಕುಮಾರ್ ಸಮ್ಮುಖದಲ್ಲಿ ಹಲವಾರು ಮುಖಂಡರುನ್ನು ಸ್ವಾಗತಿಸಿದ ಕೃಷ್ಣೇಗೌಡರನ್ನು ಬೆಂಬಲಿಸುವುದಾಗಿ ಘೋಷಿಸಿದರು.
ಪಟ್ಟಣ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಮತ ಪ್ರಚಾರ ನಡೆಸಿದರು. ಹೆಂಟಗೆರೆ ಕೊಪ್ಪಲಿನಲ್ಲಿ ನಡೆದ ಮತ ಪ್ರಚಾರದ ವೇಳೆ ಮುಖಂಡರಾದ ಹೊಸಳ್ಳಿ ವೆಂಕಟೇಶ್, ಮಾಗೋಡು ಕುಮಾರ್ ಅವರನ್ನು ಕೃಷ್ಣೇಗೌಡ ಅವರು ಸ್ವಾಗತಿಸಿದರು.
ಮುಖಂಡರಾದ ಎಂ.ಆರ್. ರಂಗಸ್ವಾಮಿ, ಮದಲಾಪುರ ಮಂಜುನಾಥ್, ಕೇಶವಮೂರ್ತಿ ಇತರರಿದ್ದರು.
0 Comments