ಎ. ಮಂಜು ದೇವೇಗೌಡರ ಕುಟುಂಬದ ಸದಸ್ಯ ಗೆಲ್ಲಿಸಿ ಎಂದ ಕುಮಾರಸ್ವಾಮಿ

ಅರಕಲಗೂಡು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎ. ಮಂಜು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಸದಸ್ಯರಾಗಿ ಸ್ಪರ್ಧಿಸುತ್ತಿದ್ದು ಮತದಾರರು ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ತಾಲೂಕಿನ ಕೇರಳಾಪುರದಲ್ಲಿ ಗುರುವಾರ ಜೆಡಿಎಸ್ ಪಂಚರತ್ನ ರಥಯಾತ್ರೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವೇಗೌಡರ ಆಶೀರ್ವಾದಿಂದ ಈ ಪಕ್ಷವನ್ನು ಉಳಿಸಿ ಬೆಳಸಿಕೊಂಡು ಬಂದಿರುವ ಎಚ್.ಡಿ. ರೇವಣ್ಣ ಅವರ ಸಹಪಾಠಿಗಳು ಹಾಗೂ ದೇವೇಗೌಡರ ಅಭಿಮಾನಿಗಳು ಯಾವುದೇ ಅನುಮಾನ ಪಡದೆ ಜನತಾ ದಳದ ಒಬ್ಬ ಸದಸ್ಯರಾಗಿರುವ ಎ. ಮಂಜು ಅವರನ್ನು ಬೆಂಬಲಿಸಬೇಕು. ಎ. ಮಂಜು ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನು ವಿಶ್ವಾಸ ಪಡೆದು ಒಟ್ಟಿಗೆ ಕೊಂಡೊಯ್ಯಲಿದ್ದಾರೆ ಎಂದರು.

ದಿ. ಮಾಜಿ ಸಚಿವ ಕೆ.ಬಿ. ಮಲ್ಲಪ್ಪ ಅವರನ್ನು ಸ್ಮರಿಸಿಕೊಳ್ಳುತ್ತೇನೆ, ರಾಜ್ಯದ ಆರೂವರೆ ಕೋಟಿ ಜನರ ಅಭಿವೃದ್ಧಿಗಾಗಿ ಪಂಚರತ್ನ ಯಾತ್ರೆಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಸ್ವಂತ ಬಲದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಯಾತ್ರೆ ನಡೆಸುತ್ತಿದ್ದೇನೆ. ನಾಡಿನದ್ಯಾತ ಪಂಚರತ್ನ ರಥ ಯಾತ್ರೆಗೆ ಜನರಿಂದ ಉತ್ತಮ ಬೆಂಬಲ ದೊರೆಯುತ್ತಿದ್ದು, ಅದೇ ಬೆಂಬಲ ಅರಕಲಗೂಡು ತಾಲೂಕಿನಲ್ಲಿಯೂ ಸಿಗುತ್ತಿದೆ. ಇಲ್ಲಿನ ಬದಲಾದ ರಾಜಕೀಯದಲ್ಲಿ ಯಾವುದೇ ಗೊಂದಲವಿಲ್ಲದೆ ಜೆಡಿಎಸ್ ಬೆಂಬಲಿಸುವುದಾಗಿ ಜನರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಮಂಜಣ್ಣ, ರೇವಣ್ಣ ಅವರು ಜೊತೆಗೂಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಹಾಸನ ಜಿಲ್ಲೆಯಲ್ಲಿ ಯಾವ ಗೊಂದಲವು ಇಲ್ಲ. ಎಲ್ಲವನ್ನು ಸರಿಪಡಿಸುತ್ತೇವೆ. ಕಾರ್ಯಕರ್ತರು ರೈತರ ಪರವಾದ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸ್ರರಜ್ ರೇವಣ್ಣ, ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್, ಮಾಜಿ ಸಚಿವ ಎ. ಮಂಜು, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ. ಸತೀಶ್, ಮುಖಂಡರಾದ ಮುದ್ದನಹಳ್ಳಿ ರಮೇಶ್ ಇತರರು ಪಾಲ್ಗೊಂಡಿದ್ದರು.

ವಿವಿಧೆಡೆ ಅದ್ದೂರಿ ಸ್ವಾಗತ: ಹಳ್ಳಿಮೈಸೂರು ಹೋಬಳಿ ಮಾರ್ಗವಾಗಿ ತಾಲೂಕಿಗೆ ಆಗಮಿಸಿದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಸಾವಿರಾರು ಕಾರ್ಯಕರ್ತರು ಸಂಭ್ರಮದ ಸ್ವಾಗತ ಕೋರಿದರು. ಕೇರಳಾಪುರ, ಕಾಳೇನಹಳ್ಳಿ, ಬಸವಾಪಟ್ಟಣ, ರಾಮನಾಥಪುರ, ದೊಡ್ಡಬೆಮ್ಮತ್ತಿ, ಹೊಳಗೋಡು, ಅಬ್ಬೂರು ಮಾಚಗೌಡನಹಳ್ಳಿ, ಕತ್ತಿಮಲ್ಲೇನಹಳ್ಳಿ ಮಾರ್ಗವಾಗಿ ಅರಕಲಗೂಡಿಗೆ ಆಗಮಿಸಿದ ಪಂಚರತ್ನ ರಥಯಾತ್ರೆಗೆ ಕಾರ್ಯಕರ್ತರು ಎಚ್.ಡಿ. ಕುಮಾರಸ್ವಾಮಿ ಪರ ಘೋಷಣೆಗಳನ್ನು ಮೊಳಗಿಸಿ ಸಂಭ್ರಮದಿAದ ಬರಮಾಡಿಕೊಂಡು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಅಭಿಮಾನ ಮೆರೆದರು.

Post a Comment

0 Comments