ಅರಕಲಗೂಡು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಮತದಾರರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಜನಸೇವೆಗೆ ಅವಕಾಶ ನೀಡಿದರೆ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿ ತೋರಿಸುವೆ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ ಹೇಳಿದರು.
ತಾಲೂಕಿನ ಅರಸೀಕಟ್ಟೆ ಲಕ್ಷ್ಮೀ ಕನ್ವೆನ್ಷನ್ ಹಾಲ್ ನಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಬೂತ್ ಸಭೆ ಹಾಗೂ ಗ್ಯಾರಂಟಿ ಕಾರ್ಡ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಸುಳ್ಳಿನ ರಾಜಕಾರಣ ಮಾಡಲು ಬಂದಿಲ್ಲ. ಈ ಹಿಂದೆ ಅಧಿಕಾರದಲ್ಲಿ ಇದ್ದವರು ಸುಳ್ಳು ಹೇಳಿ ಮತದಾರರನ್ನು ವಂಚಿಸಿದ್ದಾರೆ. ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ, ಆದರೆ ಗುರಿ ಸಾಧಿಸಿ ತೋರಿಸುವೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ಹಿಂದೆ ಜೆಡಿಎಸ್ ಗೆ ಬೆಂಬಲ ನೀಡಿದ್ದೆ. ಆದರೆ ನೀರಾವರಿ ಸೌಲಭ್ಯ ಸೇರಿದಂತೆ ಅಭಿವೃದ್ಧಿ ಕಾರ್ಯದಲ್ಲಿ ಕ್ಷೇತ್ರ ವಿಫಲತೆ ಕಂಡಿದೆ. ನನಗೆ ಒಮ್ಮೆ ಮತದಾರರು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಬಿಜೆಪಿ ದುರಾಡಳಿತದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯರ ಜೀವನದ ಮೇಲೆ ಹೊಡೆತ ಬಿದ್ದಿದೆ. ಬರಿ ವಿದ್ಯುತ್ ಬಿಲ್ ಪಾವತಿಸಲಾಗುತ್ತಿಲ್ಲ. ಬಿಜೆಪಿ ಡಿಜಿಟಲೀಕರಣ ಮಾಡಿ ವಿದ್ಯುತ್ ಬಿಲ್ ಬರೆ ಎಳೆಯಲು ಹೊರಟಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಈ ಬಾರಿ ಪ್ರತಿ ವ್ಯಕ್ತಿಗೆ ಒಂದು ತಿಂಗಳಿಗೆ 10 ಕೆಜಿ ಅಕ್ಕಿ, ಪ್ರತಿ ಕುಟುಂಬದ ಮಹಿಳೆಗೆ 2000 ರೂ, 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಮಸ್ಯೆ ನೀಗಲಿದೆ ಎಂದು ತಿಳಿಸಿದರು.
ಮುಖಂಡರಾದ ಎಸ್.ಜೆ. ದೊಡ್ಡೇಗೌಡ, ಬಿಳಗೂಲಿ ರಾಮೇಗೌಡ, ಕೆ.ಕೆ. ನಾಗರಾಜ್, ಎಲ್.ಬಿ. ಕೃಷ್ಣ, ಎ.ವಿ. ಲಿಂಗರಾಜು, ಗಣೇಶ್ ವೇಲಾಪುರಿ, ಜಮೀರ್ ಪಾಷಾ ಮಾತನಾಡಿದರು. ಮುಖಂಡರಾದ ಗಿಡ್ಡೇಗೌಡ, ಚನ್ನಕೇಶವಯ್ಯ, ರಾಮಣ್ಣ, ಸುರೇಶ್, ಗಂಗೂರು ಯೋಗಣ್ಣ, ಶಿರಿನ್ ರಂಗಸ್ವಾಮಿ, ಎಂ.ಟಿ. ನಾಗರಾಜು, ಕೆ.ಟಿ. ರವೀಂದ್ರ ಇತರರಿದ್ದರು. ಕಾರ್ಯಕ್ರಮದಲ್ಲಿ ಮುಂದಿನ ಚುನಾವಣೆಯಲ್ಲಿ ಎಂ.ಟಿ. ಕೃಷ್ಣೇಗೌಡ ಅವರನ್ನು ಗೆಲ್ಲಿಸುವಂತೆ ಪ್ರತಿಜ್ಞೆ ಮಾಡಿಸಲಾಯಿತು.
ಕಾರ್ಡ್ ವಿತರಣೆ: ಇದಕ್ಕೂ ಮುನ್ನ ಕೊಣನೂರಿನಲ್ಲಿ ಗ್ರಾಪಂ ಸದಸ್ಯ ಕೆ.ಕೆ. ನಾಗರಾಜ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣಾ ಸಮಾರಂಭದಲ್ಲಿ ಮುಖಂಡ ಎಂ.ಟಿ. ಕೃಷ್ಣೇಗೌಡ ಅವರು ನೂರಾರು ಮಹಿಳೆಯರಿಗೆ ಕಾರ್ಡ್ ವಿತರಿಸಿದರು.
0 Comments