ಸ್ನೇಹಜೀವಿ ಸೇವಾಜೀವಿ ಹೆಗ್ಗಳಿಕೆಯ ಡಾ. ದೀನೇಶ್ ಭೈರೇಗೌಡರ ಪುಸ್ತಕ ಬಿಡುಗಡೆ ಸಮಾರಂಭ

ಅರಕಲಗೂಡು: ಸಮಾಜಮುಖಿ ಸಾಧನೆಗಳನ್ನು ಪುಸ್ತಕದಲ್ಲಿ ಅಡಕಗೊಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಮೂಲಕ ಮಾದರಿಯಾಗಬೇಕಿದೆ ಎಂದು ಡಾ. ಯತೀಶ್ ಕುಮಾರ್ ತಿಳಿಸಿದರು. 

ಸಮಾಜ ಸೇವೆಯಲ್ಲಿ ಸದಾ ತೊಡಗಿಕೊಂಡಿರುವ ಖ್ಯಾತ ಮಕ್ಕಳ ತಜ್ಞ ಹಾಗೂ ಕಾಂಗ್ರೆಸ್ ಮುಖಂಡ ಡಾ.ದಿನೇಶ್‌ಭೈರೇಗೌಡ ಅವರಿಂದ ಮತ್ತೊಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಡಾ.ಯತೀಶ್‌ಕುಮಾರ್ ತಿಳಿಸಿದರು.

ತಾಲೂಕಿನ ಕಬ್ಬಳಿಗೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ಬಳಿಯ ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲಾ ರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ತಜ್ಞ ಡಾ. ದಿನೇಶ್‌ಭೈರೇಗೌಡ ಅವರ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜ ಸೇವೆಗೆ ಪ್ರಾಧಾನ್ಯತೆ ನೀಡಿ ಜನೋಪಯೋಗಿಯಾಗಿ ಕೈಗೊಳ್ಳುವ ಕಾರ್ಯಗಳು ಎಲ್ಲರ ಬದುಕಿಗೆ ನೆಮ್ಮದಿ ನೀಡುತ್ತವೆ. ವಿದ್ಯೆ ಕಲಿತು, ಉದ್ಯೋಗ, ಉದ್ಯಮದಲ್ಲಿ ತೊಡಗಿಕೊಂಡಿರುವ ಬಹುತೇಕ ಮಂದಿ ಸಮಾಜ ಸೇವೆಯನ್ನು ಮರೆಯುತ್ತಾರೆ. ಆದರೆ ಡಾ. ದಿನೇಶ್ ಭೈರೇಗೌಡ ಅವರು ತುಂಬಾ ವಿಭಿನ್ನವಾಗಿ ವೈದ್ಯ ವೃತ್ತಿ, ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಪಕ್ಷದ ಸಂಘಟನೆ, ಸಮಾಜ ಸೇವೆಯನ್ನು ಮಾಡಿಕೊಂಡು ಅಪಾರ ಜನಮನ್ನಣೆ ಗಳಿಸಿದ್ದಾರೆ. 

ಇವರ ಕಾರ್ಯಕ್ಷಮತೆಯನ್ನು ಕಂಡು ಯುವ ಲೇಖಕರು, ಇವರ ಸಾಧನೆಯನ್ನು ಪುಸ್ತಕ ಮೂಲಕ ಹೊರತಂದಿರುವುದು ಇತರರಿಗೆ ಸ್ಪೂರ್ತಿದಾಯಕವಾಗಿದೆ ಎಂದರು.
ಡಾ. ದಿನೇಶ್ ಭೈರೇಗೌಡ ಮಾತನಾಡಿ, ನಮ್ಮ ತಂದೆ ದಿ. ಕಬ್ಬಳಿಗೆರೆ ಭೈರೇಗೌಡರು ಹಳ್ಳಿಯಲ್ಲಿ ರೈತನಾಗಿ ಕೃಷಿ ಕಾಯಕದಲ್ಲಿ ತೊಡಗಿಕೊಂಡು ಜನರ ಮೆಚ್ಚುಗೆಗಳಿಸಿ ಜಿಲ್ಲಾ ಪರಿಷತ್ ಸದಸ್ಯರಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಚಿವ ಕೆ.ಬಿ.ಮಲ್ಲಪ್ಪನವರ ಸಹಪಾಠಿಗಳಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದು, ಇವರು ಹಾಕಿಕೊಟ್ಟಿರುವ ದಾರಿಯಲ್ಲಿ ಸಮಾಜ ಸೇವೆಯನ್ನು ಮಾಡುವ ಸದುದ್ದೇಶದಿಂದ ರಾಜಕೀಯ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿದ್ದೇನೆ. ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ಸದಾ ಸಮಾಜ ಸೇವೆಗೆ ತಮ್ಮ ಬದುಕು ಮುಡಪಾಗಿಟ್ಟಿರುವೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೊರೂರು ರಂಜಿತ್, ಲೇಖಕ ಉದಯ್ ಮಾತನಾಡಿದರು. ಚಿತ್ರಸಾಹಿತಿ ಎಂ.ಡಿ. ಹಾಷಂ, ಪುಟ್ಟಗೌರಮ್ಮ, ಸರಳ ದಿನೇಶ್, ಮಧು, ಶ್ರೀನಿವಾಸ್, ನವೀನ್, ಪಾರ್ವತಮ್ಮ, ಸುರೇಶ್ ಇತರರಿದ್ದರು.

Post a Comment

0 Comments