ಅಧಿಕಾರದ ಅಮಲಿನಲ್ಲಿ ಜನರ ವಿಶ್ವಾಸ ಕಳೆದುಕೊಂಡ ಎಟಿಆರ್ ಪಕ್ಷ ಸಂಘಟನೆ ಕೂಡ ಮಾಡಲಿಲ್ಲ; ಕೆ.‌ಸತೀಶ್ ಆರೋಪ

ಅರಕಲಗೂಡು: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಪಕ್ಷ ಸಂಘಟನೆಗೂ ಆದ್ಯತೆ ನೀಡದೆ ಶಾಸಕ ಎ.ಟಿ. ರಾಮಸ್ವಾಮಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಶಾಸಕರ ಹಿಡಿತದಲ್ಲಿದ್ದ  ಜೆಡಿಎಸ್ ಪಕ್ಷದ ಹಳೆಯ ಘಟಕವನ್ನು ವಿಸರ್ಜಿಸಿ ಹೊಸದಾಗಿ ರಚಿಸಲು ವರಿಷ್ಠರು ಮುಂದಾಗಿದ್ದ ನನ್ನನ್ನು ತಾಲೂಕು ಜೆಡಿಎಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಹಾಸನ ಜಿಲ್ಲಾ ಸಹಕಾರ ಬ್ಯಾಂಕ ನಿರ್ದೇಶಕ ಕೆ.‌ ಸತೀಶ್ ಹೇಳಿದರು.

ಶಾಸಕ ಎ.ಟಿ. ರಾಮಸ್ವಾಮಿ ಅವರ ದುರಾಡಳಿತದ ಪರಿಣಾಮ ತಾಲೂಕಿನ ವಿವಿಧ ಸರ್ಕಾರಿ ಕಚೇರಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲಾಗದೆ ಅಭಿವೃದ್ಧಿ ಕಂಡಿದ್ದ ಬಹುತೇಕ ರಸ್ತೆಗಳು ಹಾಳಾಗುತ್ತಿವೆ. ಇತ್ತೀಚೆಗೆ ನಡೆದ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತೆಯನ್ನು ಬಲವಂತವಾಗಿ ಕರೆಸಿ ಆಡಳಿತ ದುರುಪಯೋಗ ಪಡಿಸಿಕೊಂಡಿದ್ದಾರೆ. ಹಣ ಕೊಟ್ಟು ಜನರನ್ನು ಕರೆತಂದಿದ್ದಾರೆ. ಇದು ನಮ್ಮ ಜೆಡಿಎಸ್ ಪಕ್ಷದ ಸಂಸ್ಕೃತಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು.

ಸಹಕಾರ ಸಂಘಗಳನ್ನು ಭ್ರಷ್ಟಾಚಾರ ನಡೆಸಲಾಗಿದೆ ಎಂದು ರಾಮಸ್ವಾಮಿ ಈ ಹಿಂದೆ ನನ್ನ ವಿರುದ್ದ ಆರೋಪ ಹೊರಿಸಿದ್ದರು. ಆದರೆ ಎಚ್.ಡಿ. ದೇವೇಗೌಡರ ಮಾತಿಗೆ ಬೆಲೆ ಕೊಟ್ಟು ನಾನು ತುಟಿ‌ ಬಿಚ್ಚಿರಲಿಲ್ಲ. ಸಹಕಾರ ಸಂಘಗಳ ಆಡಳಿತದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಿರಲಿಲ್ಲ. ಏನಾದರೂ ಭಷ್ಟ್ರಚಾರ ನಡೆಸಿದ್ದರೆ ಶಾಸಕರು ಈಗಲೂ ದೊಡ್ಡಮ್ಮ ದೇವಸ್ಥಾನಕ್ಕೆ ಬಂದು ಆಣೆ ಮಾಡಲಿ ನಾನೂ ಕೂಡ ಆಣೆ ಪ್ರಮಾಣ ಮಾಡುತ್ತೇನೆ. ಶಾಸಕರಿಗೆ ಸಹಕಾರ ಕ್ಷೇತ್ರದ ಬಗ್ಗೆ ಏನೂ ತಿಳಿಯದವರಂತೆ ಮಾತನಾಡುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದದಿಂದ  ರಾಮಸ್ವಾಮಿ ಅವರು ಶಾಸಕರಾದ ಬಳಿಕ   ಕಾರ್ಯಕರ್ತರ ಸಭೆ ಕರೆದು ಪಕ್ಷ ಸಂಘಟನೆ ಮಾಡಲಿಲ್ಲ, ಬದಲಾಗಿ ಅವರ ಮನೆಯಲ್ಲಿ ಕುಳಿತು ಸಭೆ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇಲ್ಲ, ಕುಮಾರಸ್ವಾಮಿ ಅವರು ನಡೆಸುತ್ತಿರುವ ಪಂಚರತ್ನ ಯಾತ್ರೆಗೆ ಅಪಾರ ಜನ ಬೆಂಬಲ ಸಿಕ್ಕಿದೆ. ಜೆಡಿಎಸ್ ಮುಂದೆ ಅಧಿಕಾರಕ್ಕೆ ಬರಲಿದೆ. ನಾನೂ ಕೂಡ ಪಕ್ಷದ ಟಿಕೆಟ್ ಆಕಾಂಕ್ಷಿ. ಅದರೆ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.

ಮುಖಂಡರಾದ ಮಂಜುನಾಥ್, ಪಾಪಣ್ಣ, ಶಶಿಕುಮಾರ್, ವಕೀಲ ಪ್ರಕಾಶ್ ಗೋಷ್ಠಿಯಲ್ಲಿದ್ದರು.

Post a Comment

0 Comments