ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಹಲವು ಚರ್ಚೆಗಳಿಗೆ ಸಾಕ್ಷಿಯಾದ ಸಭೆ

ಅರಕಲಗೂಡು: ಇಲ್ಲಿನ ಪಪಂ ಸಾಮಾನ್ಯ ಸಭೆ ಅಧ್ಯಕ್ಷ  ಎಸ್. ಎಸ್. ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆನಡೆಯಿತು. ಸಭೆ ಹಲವಾರು ಚರ್ಚೆಗಳಿಗೆ ಸಾಕ್ಷಿಯಾಯಿತು.

ಪಟ್ಟಣದಲ್ಲಿ ನೆನಗುದಿಗೆ ಬಿದ್ದಿರುವ ಒಳಚರಂಡಿ ವ್ಯವಸ್ಥೆ ಬಗ್ಗೆ  ಸರ್ಕಾರದ ಗಮನ ಸೆಳೆಯುವ ಬಗ್ಗೆ  ಹಿಂದಿನ ಸಭೆಯಲ್ಲಿ ವಿಸ್ತೃತ  ಚರ್ಚೆ ನಡೆದಿದ್ದರೂ ಸಭಾ ನಡವಳಿ ಪುಸ್ತಕದಲ್ಲಿ ಧಾಖಲಿಸದಿರುವ ಬಗ್ಗೆ ಶುಕ್ರವಾರ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. 

ಸದಸ್ಯ ರಮೇಶ್ ವಾಟಾಳ್ ಮಾತನಾಡಿ, ಒಳಚರಂಡಿ ವ್ಯವಸ್ಥೆ ಕಾಮಗಾರಿ ಅಧರ್ಕ್ಕೆ ನಿಂತು ವರ್ಷಗಳೆ ಕಳೆದಿವೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಪಪಂನ ಎಲ್ಲ ಸದಸ್ಯರೂ ಒಗ್ಗೂಡಿ  ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆ ಮುಂದೆ  ಸತ್ಯಾಗ್ರಹ ನಡೆಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಸಭೆಯೂ ಇದಕ್ಕೆ ಒಪ್ಪಿಗೆ ಸೂಚಿಸಿತ್ತು, ಮಾಧ್ಯಮಗಳು ಇದಕ್ಕೆ ಪ್ರಾಮುಖ್ಯತೆ ನೀಡಿ ಸುದ್ದಿ ಮಾಡಿದ್ದವು. ಆದರೆ ಇಂತಹ ಪ್ರಮುಖ ವಿಷಯದ ಕುರಿತು ನಡವಳಿಕೆ ಪುಸ್ತಕದಲ್ಲಿ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ವಿಷಯ ಸೂಚಿಯಲ್ಲಿ ಇರದಿದ್ದ ಕಾರಣ ಇದನ್ನು ದಾಖಲು ಮಾಡಿಲ್ಲ ಎಂದು ಅಧ್ಯಕ್ಷ ಪ್ರದೀಪ್ ಕುಮಾರ್ ಸಮಾಜಾಯಿಶಿ ನೀಡಿದರು.  ಈ ಹಂತದಲ್ಲಿ ಕೆಲಕಾಲ ಕಾವೇರಿದ ಚರ್ಚೆ ನಡೆಯಿತು.  ನಡವಳಿಕೆ ಪುಸ್ತಕದಲ್ಲಿ ದಾಖಲಾಗಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುವ ನೀವು   ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು ಬಿಟ್ಟರೆ ಕಳೆದ  ಎರಡು ತಿಂಗಳಿನಿಂದ ಸದಸ್ಯರನ್ನು ಸಂಪರ್ಕಿಸಿ ಹೋರಾಟಕ್ಕೆ ಮುಂದಾಗಲಿಲ್ಲ  ಎಂದು ಸದಸ್ಯ ಅನಿಕೇತನ್  ಪ್ರಶ್ನಿಸಿದರು. 

ಪಪಂ 122 ವಾಣಿಜ್ಯ ಮಳಿಗೆ ಹರಾಜಿನಲ್ಲಿ ಗೋಲ್ ಮಾಲ್ ನಡೆದಿದೆ.  ಕೆಲ ಮಳಿಗೆಗಳು ರೂ 50 ಸಾವಿರದಿಂದ ರೂ 74 ಸಾವಿರ ಬಾಡಿಗೆಗೆ ಹರಾಜಾಗಿದ್ದರೆ ಇನ್ನು ಕೆಲವು ಮಳಿಗೆಗಳು ಕೇವಲ ರೂ 2 ಸಾವಿರದೊಳಗೆ  ಬಾಡಿಗೆ ಹರಾಜು ನಿಂತಿದೆ. 18 ಮಳಿಗೆಗಳಿಗೆ ಯಾರೂ ಬಿಡ್ ಮಾಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಸಭೆಯಲ್ಲಿ ಮಳಿಗೆಗಳ ಬಹಿರಂಗ ಹರಾಜು ನಡೆಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು,  ಈ ಕುರಿತು ತನಿಖೆ ನಡೆಯಬೇಕು. ಎಂದು ರಮೇಶ್ ವಾಟಾಳ್ ಆಗ್ರಹಿಸಿದರು.  ಮಳಿಗೆ ಹರಾಜು ಪ್ರಕಿಯೆ ಕುರಿತು ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ  ಎಂದು ಸದಸ್ಯೆ ಎಚ್. ಎಸ್. ರಶ್ಮಿ ಆಕ್ಷೇಪ ವ್ಯಕ್ತಪಡಿಸಿದರು. 

ಮಳಿಗೆ ಹರಾಜು ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಟೆಂಡರ್ ಕಂ ಈ ಪ್ರೆಕ್ಯೂರ್  ಮೆಂಟ್ ವಿಧಾನದಲ್ಲಿ ನಡೆದಿದೆ. ಬಿಡ್ ಆಗದ ಮಳಿಗೆಗಳ ಮರು ಹರಾಜು ನಡೆಯಲಿದೆ ಎಂದು ಅಧ್ಯಕ್ಷ ಪ್ರದೀಪ ಕುಮಾರ್  ತಿಳಿಸಿದರು.  

ಪಟ್ಟಣದಲ್ಲಿ ನಿರ್ಮಿಸಿರುವ ಪಾದಾಚಾರಿ ರಸ್ತೆ ಅವೈಜ್ಞಾನಿಕವಾಗಿದ್ದು ಜನಸಾಮಾನ್ಯರಿಗೆ ಅನುಕೂಲಕ್ಕೀಂತ ಅನಾನುಕೂಲವೆ ಹೆಚ್ಚಾಗಿದೆ. ಪಾದಾಚಾರಿ ಮಾರ್ಗವನ್ನು ರಸ್ತೆಗಿಂತ ಎತ್ತರಕ್ಕೆ ನಿರ್ಮಿಸದೆ ಸಮತಟ್ಟು ಮಾಡಿರುವ ಕಾರಣ ವಾಹನಗಳ ನಿಲ್ದಾಣವಾಗಿ ಮಾರ್ಪಟಿದ್ದೆ ಎಂದು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ಬಡಾವಣೆಗಳಲ್ಲಿ ಮನೆ ಕಟ್ಟುವವರು ವಾಹನ ನಿಲುಗಡೆಗೆ  ಸ್ಥಳಾವಕಾಶ ಕಲ್ಪಿಸಿಕೊಳ್ಳದೆ ಮನೆ ಮುಂದಿನ ರಸ್ತೆ ಬದಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಜನ, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಈ ಕುರಿತು ಬಿಗಿ ನಿಯಮ ರೂಪಿಸುವಂತೆ ಸದಸ್ಯೆ ರಶ್ಮಿ ಒತ್ತಾಯಿಸಿದರು.  

ನೆಲಬಾಡಿಗೆ ಪಡೆದು  ತಾತ್ಕಾಲಿಕ ಮಳಿಗೆ ನಿರ್ಮಿಸಿ ಕೊಂಡು ವಹಿವಾಟು ನಡೆಸುತ್ತಿರುವ  ವ್ಯಾಪಾರಿಗಳು ನೀಡುತ್ತಿರುವ ಬಾಡಿಗೆ  ತುಂಬಾ ಕಡಿಮೆ ಇದ್ದು ಇದನ್ನು ಹೆಚ್ಚಳ ಮಾಡಬೇಕು, ಕುವೆಂಪು ಉದ್ಯಾನದಲ್ಲಿ  ಕವಿ ಕುವೆಂಪು ಅವರ ಪ್ರತಿಮೆ  ಸ್ಥಾಪನೆ ಮಾಡುವಂತೆ  ಸದಸ್ಯ ನಿಖಿಲ್ ಕುಮಾರ್  ಒತ್ತಾಯಿಸಿದರು. 

 ನೆಲಬಾಡಿಗೆಯನ್ನು ತಿಂಗಳಿಗೆ ರೂ 2 ಸಾವಿರದಂತೆ ವರ್ಷಕ್ಕೆ ರೂ 24 ಸಾವಿರಕ್ಕೆ ಏರಿಸಲು ಸಭೆ  ನಿರ್ಧರಿಸಿತು.  ಗ್ರಂಥಾಲಯದ ಹಿಂಭಾಗದ ರಸ್ತೆಯಲ್ಲಿ ಇರುವ ಮಾಂಸ ಮಾರಾಟ ಅಂಗಡಿ ತೆರವು ಕುರಿತು ಸಭೆಯಲ್ಲಿ ಕೆಲಕಾಲ ಕಾವೇರಿದ ಚರ್ಚೆನಡೆಯಿತು.  ಪ್ರಕರಣ ನ್ಯಾಯಾಲಯದ ಮುಂದೆ ಇದ್ದು  ತೀರ್ಪು ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿ ಚರ್ಚೆಗೆ ಕೊನೆ ಹಾಡಿದರು. 

ದಸರಾ ಉತ್ಸವದ ಆಯುಧ ಪೂಜೆ ಕಾರ್ಯಕ್ರಮಕ್ಕೆ ಪಪಂ ಹಣ ವ್ಯಯಮಾಡಿರುವುದು ಚರ್ಚೆಗೆ ಗ್ರಾಸವಾಯಿತು. ದಸರಾ ಉತ್ಸವಕ್ಕೆ ಸರ್ಕಾರ ರೂ 20 ಲಕ್ಷ  ಅನುದಾನ ನೀಡುತ್ತಿದೆ. ಸರ್ಕಾರಿ ವಾಹನಗಳ ಅಲಂಕಾರಕ್ಕೆ ಮತ್ತು ಬನ್ನಿ ಮಂಟಪದ ಸುಣ್ಣ, ಬಣ್ಣಕ್ಕೆ ಪಪಂ ಹಣ ಖರ್ಚು ಮಾಡುತ್ತಿರುವುದು ತರವಲ್ಲಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ದಸರಾ ಸಮಿತಿ ತನ್ನ ಅನುದಾನದಲ್ಲಿ ಇದನ್ನು ಭರಿಸಬೇಕು ಎಂದರು. 

ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳವ ಹಾಗೂ ಜಮಾ , ಖರ್ಚುಗಳ ಬಗ್ಗೆ ಸಭೆ ಚರ್ಚಿಸಿ ಒಪ್ಪಿಗೆ ನೀಡಿತು. ಸದಸ್ಯರಾದ ಹೂವಣ್ಣ, ಕೃಷ್ಣಯ್ಯ, ಲಕ್ಷ್ಮಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸುಬಾನ್ ಷರೀಪ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ  ಉಪಸ್ಥಿತರಿದ್ದರು.

Post a Comment

0 Comments