ಅರಕಲಗೂಡು: ಕೋಟಿಗಟ್ಟಲೆ ವೆಚ್ಚದ ಕಾಮಗಾರಿಗಳ ಸಾಚಾತನ ಕಾಣಲು ಒಮ್ಮೆ ನಾಲಾ ಏರಿ ಮೇಲೆ ಸುತ್ತು ಹಾಕಬೇಕು, ಇದಕ್ಕರ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ನಡೆದಿರುವ ಹೇಮಾವತಿ ಬಲದಂಡೆ ನಾಲೆಯ ದುರಸ್ಥಿ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟ ಹಾಗೂ ಅವೈಜ್ಞಾನಿಕವಾಗಿದ್ದು ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನರಸೇಗೌಡ ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಮಾಧ್ಯಮದವರೊಂದಿಗೆ ತೆರಳಿದಾಗ ಕಾಮಗಾರಿ ಅದ್ವಾನ ಅಷ್ಟಿಷ್ಟಲ್ಲ. ಅವರು ಮಾತನಾಡುತ್ತಾ, ನಾಲಾ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸೋಪಾನ ಕಟ್ಟೆಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣ ಮಾಡಿಲ್ಲ, ಜನರು ಮಟ್ಟಿಲು ಇಳಿಯಲು ಹಾಗೂ ಏರಲು ತೀವ್ರ ತೊಂದರೆಯಾಗುತ್ತಿದೆ. ಬಟ್ಟೆ ಒಗೆಯಲು ನಿರ್ಮಿಸಿರುವ ಕಟ್ಟೆಯಲ್ಲಿ ಕಬ್ಬಣದ ರಾಡುಗಳನ್ನು ಹಾಗೆ ಉಳಿಸಿದ್ದು ಬಟ್ಟೆಗಳಿಗೆ ಸಿಲುಕಿ ಹರಿದು ಹಾಳಾಗುತ್ತಿವೆ. ಮಹಿಳೆಯರು ಬಟ್ಟೆ ತೊಳೆಯುವುದನ್ನು ಬಿಟ್ಟು ವರ್ಷಗಳೆ ಕಳೆದಿದೆ ಎಂದು ಆಪಾದಿಸಿದರು.
ನಾಲಾ ಲೈನಿಂಗ್ ಕಾರ್ಯ ಕಳಪೆಯಾಗಿದ್ದು ಕಿತ್ತು ಬರುತ್ತಿದೆ. ದನ ಕರುಗಳಿಗೆ ನೀರು ಕುಡಿಯಲು ನಿರ್ಮಿಸಿರುವ ರ್ಯಾಂಪ್ ಗಳು ಸರಿಯಾಗಿಲ್ಲ. ನಾಲೆಯ 3.4 ಕಿ.ಮೀ ಬಳಿ ನಿರ್ಮಿಸಿರವ ಸೇತುವೆಯನ್ನು ಅವೈಜ್ಞಾನಿಕವಾಗಿ 3 ಅಡಿ ಎತ್ತರಿಸಿರುವ ಕಾರಣ ಜನ, ವಾಹನಗಳು ತಿರುಗಾಡಲು ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು.
ರೂ 370 ಕೋಟಿ ವೆಚ್ಚದಲ್ಲಿ ನಡೆಸಿರುವ ಕಾಮಗಾರಿ ಇಷ್ಟೊಂದು ಕಳೆಪಯಾಗಿ ಕೂಡಿರರುವ ಬಗ್ಗೆ ನೀರಾವರಿ ಇಲಾಖೆ ಕಚೇರಿಗೆ ಹತ್ತಾರು ಬಾರಿ ಅಲೆದು ಅಧಿಕಾರಿಗಳ ಗಮನಕ್ಕೆ ತಂದರೂ ಸರಿಪಡಿಸುವುದಾಗಿ ಭರವಸೆ ನೀಡಿದರೆ ಹೊರತು ಕ್ರಮ ಕೈಗೊಳ್ಳಲಿಲ್ಲ,
ಶಾಸಕ ಎ.ಟಿ.ರಾಮಸ್ವಾಮಿ ಒಮ್ಮೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು. ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಗಮನಕ್ಕೆ ತಂದರೂ ಯಾವುದೆ ಕ್ರಮಕ್ಕೆ ಮುಂದಾಗಲಿಲ್ಲ, ಯಾಕೆ ಎನ್ನುವುದು ಅರ್ಥವಾಗದು ಎಂದು ಆರೋಪಿಸಿದರು.
ಕಳಪೆ ಕಾಮಗಾರಿ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಹಾಗೂ ಅವೈಜ್ಞಾನಿಕವಾಗಿ ನಡೆದಿರುವ ಕಾಮಗಾರಿಯನ್ನು ಕೂಡಲೆ ಸರಿಪಡಿಸ ದಿದ್ದರೆ ಸುತ್ತಮುತ್ತಲ ಗ್ರಾಮಗಳ ರೈತರೊಂದಿಗೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಸಿದರು.
.
0 Comments