ಅರಕಲಗೂಡು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಗಳಿಸುವ ಜತೆಗೆ ಜೀವನದ ಮೌಲ್ಯಗಳನ್ನು ರೂಢಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣದ ನಿರ್ಮಾತೃಗಳಾಗಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ಸಲಹೆ ನೀಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಹಾಸನ ಪದವಿ ಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿದ್ದ ಫ್ರೆಶರ್ಸ್ ಡೇ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಎಷ್ಟು ಮುಖ್ಯವೋ ಉತ್ತಮ ನಡತೆ, ಒಳ್ಳೆಯ ಸಂಸ್ಕಾರಗಳನ್ನು ರೂಢಿಸಿಕೊಳ್ಳುವುದು ಅಷ್ಟೆ ಅತ್ಯವಶ್ಯಕ. ಕರೊನಾ ಹೆಮ್ಮಾರಿ ವಕ್ಕರಿಸಿದಂತೆ ಮುಂದೆ ಮತ್ತ್ಯಾವ ಮಾರಕ ರೋಗಗಳು ಉಲ್ಭಣಿಸುತ್ತವೆ ಎನ್ನುವುದರ ಅರಿವು ಇರುವುದಿಲ್ಲ. ಅಂತೆಯೇ ಜೀವನದ ಕಾಲಘಟ್ಟದಲ್ಲಿ ಬಂದೊದಗುವ ಸಮಸ್ಯೆಗಳನ್ನು ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಬದುಕಿನ ಸಂಕಷ್ಟದ ಸಂಕೋಲೆಗಳನ್ನು ಮೆಟ್ಟಿ ಶಿಕ್ಷಣ ಕೊಡಿಸಲು ಶ್ರಮಿಸಿದ ತಂದೆ ತಾಯಿಗಳು ಹಾಗೂ ವಿದ್ಯೆ ಕಲಿಸಿದ ಗುರುವಿನ ಋಣ ಮರೆಯದೆ ಸಮಾಜದ ಉನ್ನತಿಗೆ ದೊಡ್ಡ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಟೈಮ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಸಮಯಕ್ಕೆ ಮಹತ್ವ ನೀಡಿ ಕಲಿಕೆಗೆ ಕಠಿಣ ಪರಿಶ್ರಮ ವ್ಯಯಿಸಬೇಕು. ಶಿಕ್ಷಣ ಪಡೆದ ವಿದ್ಯಾರ್ಥಿಗಳು ಭವಿಷ್ಯದ ಉದ್ಯೋಗಕ್ಕಾಗಿ ಚಿಂತಿಸದೆ ಹತ್ತಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತಹ ಕಾರ್ಖಾನೆಗಳನ್ನು ಕಟ್ಟುವ ಧೀರರಾಗಬೇಕು. ಆಗ ಮಾತ್ರ ತಾವು ಕಲಿತ ಶಿಕ್ಷಣಕ್ಕೆ ಹಾಗೂ ಸಮಾಜಕ್ಕೆ ಮೌಲ್ಯಯುತವಾದ ಬೆಲೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಪ್ರಾಂಶುಪಾಲ ಪಿ. ನವೀನ್ ಅಧ್ಯಕ್ಷತೆ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಿನಾರಾಯಣ್, ಉಪನ್ಯಾಸಕರಾದ ಸುನೀಲ್, ನಾಗಪ್ಪ ಇತರರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪೋಷಕರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಆಕರ್ಷಕವಾದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಪ್ರತಿಭೆ ಮೆರೆದರು.
0 Comments