ಅರಕಲಗೂಡು: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮುದಾಯದ ಜನತೆ ಸಂಘಟಿತರಾಗಿ ಸುಧಾರಣೆ ಹೊಂದಬೇಕಿದೆ ಎಂದು ಕೊಂಚೂರು ಸವಿತಾ ಮಹಾಸಂಸ್ಥಾನ ಪೀಠದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬಸವಾಪಟ್ಟಣ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಭಕ್ತರಿಂದ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಕ್ಷೌರಿಕ ವೃತ್ತಿ ಪವಿತ್ರವಾದ ಕಾಯಕವಾಗಿದ್ದು ನಾಗರಿಕ ಸಮಾಜದಲ್ಲಿ ಈ ಸಮುದಾಯಕ್ಕೆ ಗೌರವಯುತ ಸ್ಥಾನ ಧಕ್ಕಬೇಕಿದೆ. ಗ್ರಾಮೀಣ ಭಾಗದಲ್ಲಿ ಸಮುದಾಯದ ಏಳಿಗೆಗೆ ಜಾಗೃತಿ ವಹಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಕೊಂಚೂರು ಸುಕ್ಷೇತ್ರದಲ್ಲಿ ಪೀಠ ಸ್ಥಾಪಿಸಿದ್ದು ಗೋ ಶಾಲೆ ಕೂಡ ತೆರೆಯಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಲಾಗಿದೆ. ಮುಖ್ಯವಾಗಿ ಜಲ ಮೂಲಗಳನ್ನು ಗುರುತಿಸಿ ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ ನೀರಾವರಿಗೆ ಹಾಗೂ ಪರಿಸರದ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ಸುಕ್ಷೇತ್ರದಲ್ಲಿ ವಿಷ್ಣುಗುರು ಪೀಠ ಅಭಿವೃದ್ಧಿ ಪಡಿಸುವ ಆಶಯವಿದೆ. ಪೀಠದ ಸರ್ವಾಂಗೀಣ ಅಭಿವೃದ್ಧಿಗೆ ಸಮುದಾಯ ಜನರು ಕೈಜೋಡಿಸುವ ಮೂಲಕ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಶ್ರಿಗಳ ಆಪ್ತ ಕಾರ್ಯದರ್ಶಿ ರಾಘವೇಂದ್ರ ಶಿಕಾರಿಪುರ, ಸವಿತಾ ಸಂಘದ ಹಾಸನ ಜಿಲ್ಲಾಧ್ಯಕ್ಷ ರವಿಕುಮಾರ್, ಸಕಲೇಶಪುರ ಗೌರವಾಧ್ಯಕ್ಷ ನಾಗರಾಜ್, ತಾಲೂಕು ಸಂಘದ ಅಧ್ಯಕ್ಷ ಎಂ.ಎ. ಗಿರೀಶ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ಕೇರಳಾಪುರ ಘಟಕದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ನಾಗರಾಜ್, ಬಸವಾಪಟ್ಟಣ ಕಿರಣ್ ಕುಮಾರ್, ತುಕಾರಾಂ, ಮಣಿ, ಯೋಗೇಶ್, ಕೆರೆಕೋಡಿ ಮಂಜುನಾಥ್ ಇತರರಿದ್ದರು.
ಇದಕ್ಕೂ ಮುನ್ನ ಕೊಂಚೂರು ಸವಿತಾ ಮಹಾಸಂಸ್ಥಾನ ಪೀಠದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಅವರು ತಾಲೂಕಿನ ಮಧುರನಹಳ್ಳಿ, ಕೇರಳಾಪುರ ಗ್ರಾಮದಲ್ಲಿ ಪ್ರವಾಸ ಕೈಗೊಂಡು ಸಮುದಾಯದ ಜನರ ಶೈಕ್ಷಣಿಕ ಸ್ಥಿತಿಗತಿ, ಕ್ಷೌರಿಕ ವೃತ್ತಿ, ಸಮಾಜದ ಜನರ ಯೋಗಕ್ಷೇಮ ವಿಚಾರಿಸಿದರು. ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿ ಗೌರವ ಸಮರ್ಪಣೆ ನೀಡಿ ಬೀಳ್ಕೊಟ್ಟರು.
0 Comments