ಅರಕಲಗೂಡು: ತಾಲೂಕಿನ ಕಂಠೇನಹಳ್ಳಿ ಕಾವಲು ಗ್ರಾಮದ ವಿದವೆ ಮೀನಾಕ್ಷಮ್ಮ ಅವರ ವಾಸದ ಮನೆ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಹಾನಿಗೀಡಾಗಿದ್ದು ಪರಿಹಾರ ಸಿಗದೆ ಕಣ್ಣೀರಿಡುತ್ತಿದ್ದಾರೆ. ಈ ಮಹಿಳೆಗೆ ಪರಿಹಾರ ಧಕ್ಕಬೇಕಿದೆ.
ಕಳೆದ ಬುಧವಾರ ಬಿದ್ದ ಅತಿಯಾದ ಮಳೆಗೆ ಗ್ರಾಮದ ವಿದವೆ ಮೀನಾಕ್ಷಮ್ಮ ಅವರ ಮನೆಯ ಗೋಡೆ ಕುಸಿದು ಬಿದ್ದು ಹಾಳಾಗಿದೆ. ಈಕೆಯ ಪತಿ ಸೋಮೇಗೌಡ ಅಂಗವಿಕಲರಾಗಿದ್ದು ನಾಲ್ಕು ವರ್ಷಗಳ ಹಿಂದೆ ಅಸುನೀಗಿದ್ದಾರೆ. ಇಬ್ಬರು ಪುತ್ರಿಯರನ್ನು ಬೇರೆಡೆಗೆ ಮದುವೆ ಮಾಡಿಕೊಡಲಾಗಿದೆ. ಇದೀಗ ವಿಧವೆ ಮಹಿಳೆ ಒಬ್ಬರೆ ಮನವೆಯಲ್ಲಿ ಜೀವಿಸುತ್ತಿದ್ದು ಮಳೆಗೆ ಇರುವ ಒಂದು ಮನೆ ಮುರಿದು ಬಿದ್ದಿದ್ದು ಈಕೆಗೆ ಆಕಾಶವೇ ತಲೆಮೇಲೆ ಕಳಚಿದಂತಾಗಿದೆ. ಮನೆ ಗೋಡೆ ಬಿದ್ದು ವಾರ ಸಮೀಪಿಸಿದರೂ ಪರಿಹಾರ ನೀಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.
ಮಳೆಗೆ ಮನೆ ಬಿದ್ದು ವಾರ ಸಮೀಪಿಸುತ್ತಿದ್ದು ವಿಧವೆ ಮಹಿಳೆಯ ಸೋಮವಾರಪೇಟೆಯಲ್ಲಿ ನೆಲಸಿರುವ ಅಳಿಯ ಮಹೇಶ್ ಅವರು ಸೋಮವಾರ ಕಡುವಿನ ಗ್ರಾಪಂ ಪಿಡಿಒ ನಾಗಯ್ಯ ಅವರ ಗಮನಕ್ಕೆ ತಂದ ಬಳಿಕ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅತಿವೃಷ್ಟಿಗೆ ಮನೆ ಹಾನಿಗೀಡಾಗಿರುವುದಕ್ಕೆ ಗ್ರಾಮ ಲೆಕ್ಕಾಧಿಕಾರಿ ಬಂದು ವರದಿ ಮಾಡಿ ಕಳುಹಿಸಬೇಕು ಎಂದು ಉತ್ತರಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಮಾತ್ರ ಇದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಪರಿಹಾರ ಒದಗಿಸಿಕೊಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ವಿದವೆ ಮಹಿಳೆ ಮಾತ್ರ ಸರ್ಕಾರದ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಬಂದೊದಗಿದೆ.
ಪರಿಹಾರ ಒದಗಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದು ವಿದವೆ ಮಹಿಳೆ ಕಣ್ಣೀರುಡುತ್ತಿದ್ದಾರೆ ಎಂದು ಅಳಿಯ ಮಹೇಶ್ ಅವಲತ್ತುಕೊಂಡಿದ್ದಾರೆ.
ಗ್ರಾಪಂ ಪಿಡಿಒ ನಾಗಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಕಂಠೇನಹಳ್ಳಿ ಕಾವಲು ಗ್ರಾಮದಲ್ಲಿ ವಿದವೆ ಮಹಿಳೆ ಮನೆ ಮಳೆಗೆ ಹಾನಿಗೀಡಾಗಿರುವ ವಿಷಯ ತಿಳಿದು ಭೇಟಿ ನೀಡಿ ಪರಿಶೀಲಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳನ್ನು ಕರೆಸಿ ವರದಿ ನೀಡಲು ತಿಳಿಸಲಾಗಿದೆ ಎಂದರು.
ಕೊಣನೂರು ರಾಜಸ್ವ ನಿರೀಕ್ಷಕ ಮಂಜುನಾಥ್ ಮಾತನಾಡಿ, ಆರೋಗ್ಯ ಸರಿಯಿಲ್ಲದೆ ರಜೆ ಮೇಲೆ ತೆರಳಿದ್ದೆ. ಇದೀಗ ವಿಷಯ ಗಮನಕ್ಕೆ ಬಂದಿದ್ದು ವಿದವೆ ಮಹಿಳೆಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
0 Comments