ಅರಕಲಗೂಡು: ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಮಹಿಳೆಯ ಒಡವೆಗಳನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಕೊಣನೂರು ಪೊಲೀಸರು ಬಂಧಿಸಿದ್ದಾರೆ.
ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರಿ ಚನ್ನರಾಯಪಟ್ಟಣ ತಾಲೂಕು ಚಾಮರಾಜಪುರ ಗ್ರಾಮದ ರಾಮು (35), ಕೂಲಿ ಕೆಲಸ ಮಾಡುವ ಇದೇ ಊರಿನ ಅಣ್ಣಯ್ಯ (25), ಸಾಲಿಗ್ರಾಮ ಹೋಬಳಿ ಮಿರ್ಲೆ ಆರ್.ಎಂ.ಸಿ. ಮಾರುಕಟ್ಟೆಯಲ್ಲಿ ನೆಲೆಸಿದ್ದ ಮಿಕ್ಸಿ ರಿಪೇರಿ ಮಾಡುವ ಸುರೇಶ್ ಅಲಿಯಾಸ್ ಕಿಟ್ಟಿ (32) ಬಂಧಿತ ಕಳ್ಳರು. ಕಳ್ಳರು ಮಹಿಳೆಯಿಂದ ಅಪಹರಿಸಿದ್ದ 1.60 ಲಕ್ಷ ರೂ ಮೌಲ್ಯದ 40 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ಕೃಷ್ಣಮೂರ್ತಿ, ಇವರ ಪತ್ನಿ ಕೆ.ಆರ್. ಚೈತ್ರ ಅವರು ಕಳೆದ ಏಪ್ರಿಲ್ 25ರಂದು ಕೇರಳಾಪುರದ ಬಿ.ಜಿ.ಎಸ್.ಕೆ. ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಹಾಲು ತುಪ್ಪ ಬಿಡಲು ಸರದಿ ಸಾಲಿನಲ್ಲಿ ನಿಂತಿದ್ದಾಗ ಕಳ್ಳರು ಕೈಚಳಕ ಪ್ರದರ್ಶಿಸಿ ಈಕೆಯ ಲಾಂಗ್ ವೆನಿಟಿ ಬ್ಯಾಗ್ ಜಿಪ್ ಬಿಚ್ಚಿ ಅದರೊಳಗಿದ್ದ ಒಡವೆಗಳನ್ನು ಕದ್ದೊಯ್ದು ಪರಾರಿಯಾಗಿದ್ದರು.
ಈ ಕುರಿತು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕಳ್ಳರ ಸೆರೆಗೆ ಬಲೆ ಬೀಸಿದ್ದರು. ಮೇ. 21ರಂದು ರಾಮನಾಥಪುರ ನಾಗಣ್ಣ ಕಾಂಪ್ಲೆಕ್ಸ್ ಬಳಿ ಕಳ್ಳತನ ಮಾಡಿದ್ದ ಒಡವೆಗಳನ್ನು ಕಳ್ಳರು ಮಾರಾಟ ಮಾಡಲು ಬಂದು ಹೊಂಚು ಹಾಕುತ್ತಿದ್ದ ವೇಳೆ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
0 Comments