ಅರಕಲಗೂಡು: ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿದ್ದು ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಮಾಜಿ ಸಚಿವ ಎ. ಮಂಜು ತಿಳಿಸಿದರು.
ಪಟ್ಟಣ ವ್ಯಾಪ್ತಿಯ ಪೇಟೆ ಮಾಚಗೌಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬಸವೇಶ್ವರ ಸ್ವಾಮಿ ನೂತನ ದೇವಾಲಯದ ಉದ್ಘಾಟನೆ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಗ್ರಾಮಸ್ಥರು ದಾನಿಗಳ ನೆರವು ಪಡೆದು ದೇವಾಲಯವನ್ನು ಜೀರ್ಣೋದ್ದಾರ ಮಾಡಿರುವುದು ಸಂತಸದ ಸಂಗತಿ, ಪ್ರತಿ ಗ್ರಾಮದಲ್ಲೂ ಒಂದು ದೇವಾಲಯ ಮತ್ತು ಶಾಲೆ ಇರುವುದು ಅಗತ್ಯ ಎಂದರು.
ಮಕ್ಕಳ ತಜ್ಞ ಡಾ ದಿನೇಶ್ ಬೈರೇಗೌಡ ಮಾತನಾಡಿ, ದೇವಾಲಯದ ನಿರ್ಮಾಣಕ್ಕೆ ಆಸಕ್ತಿ ತೋರಿದಂತೆ ಗ್ರಾಮದ ಶಾಲೆಯ ಅಭಿವೃದ್ದಿಗೂ ಗಮನ ಹರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ವಿ.ಎ. ನಂಜುಂಡ ಸ್ವಾಮಿ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ಮುಖಂಡ ಗೋವಿಂದೇಗೌಡ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಮುಖಂಡ ಎಂ.ಆರ್.ರಾಮೇಗೌಡ, ಮಾತನಾಡಿದರು. ಚಿಲುಮೆ ಮಠದ ಮಠಾಧೀಶ ಜಯದೇವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಬಸವೇಗೌಡ, ಜವರಯ್ಯ, ಮೋಹನ್, ಮಂಜುನಾಥ್, ಕಾಂತರಾಜ್, ತುಳಸಿರಾಮ್, ಆನಂದ್ ಇದ್ದರು. ದೇವಾಲಯದ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಬೆಳಿಗ್ಗೆ ವಿವಿಧ ಧಾರ್ಮಿಕ ಕೈಂಕರ್ಯ ಹಾಗೂ ಹೋಮಗಳನ್ನು ನಡೆಸಿ ನೂತನ ದೇವಾಲಯದ ಉದ್ಘಾಟನೆ ನೆರವೇರಿಸಲಾಯಿತು. ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುಜೆ ಸಲ್ಲಿಸಿದರು. ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
0 Comments