ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ದುರಸ್ತಿ ಕಾಮಗಾರಿ ಕಳಪೆಯಾಗಿ ಸಾಗಿದ್ದು ಸರ್ಕಾರದ ಅನುದಾನ ದುರುಪಯೋಗ ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಆರೋಪಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಮಾತನಾಡಿ ಅವರು, ಸುಮಾರು ಐವತ್ತು ವರ್ಷಗಳಷ್ಟು ಹಳೆಯದಾದ ಸರ್ಕಾರಿ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದೆ. ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಶಾಸಕರು ವಿಫಲರಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಲೆನಾಡು ಪ್ರದೇಶದ ಹೋಬಳಿ ಕೇಂದ್ರವಾದ ಮಲ್ಲಿಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸುತ್ತಲಿನ ಹಳ್ಳಿಗಳ ಅಪಾರ ಜನರು ಚುಕಿತ್ಸೆಗೆ ಬರುತ್ತಾರೆ. ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯಗಳ ಕೂಲಿ ಕಾರ್ಮಿಕರು ಆಸ್ಪತ್ರೆಯನ್ನೆ ಅವಲಂಬಿಸಿದ್ದಾರೆ. ಆದರೆ ಓಬಿರಾಯನ ಕಾಲದ ಆಸ್ಪತ್ರೆ ಕಟ್ಟಡ ಅಭಿವೃದ್ಧಿ ಕಂಡಿಲ್ಲ. ಸಿಬ್ಬಂದಿ ಕೊರತೆ ಇದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಹೊಸ ಕಟ್ಟಡ ಸ್ಥಾಪಿಸಿ ರೋಗಿಗಳಿಗೆ ಅಗತ್ಯವಾದ ಚಿಕಿತ್ಸಾತ್ಮಕ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯಿಸಲಾಗಿದೆ ಎಂದು ದೂರಿದರು.
ಮೇಲ್ದರ್ಜೆ ಕಾಣದ ಆಸ್ಪತ್ರೆ ದುರಸ್ತಿಗಾಗಿ ಸರ್ಕಾರ 17 ಲಕ್ಷ ರೂ ಅನುದಾನ ನೀಡಿದೆ. ಆದರೆ ದುರಸ್ತಿ ಕಾರ್ಯ ಮೇಲ್ನೋಟಕ್ಕೆ ಕಳಪೆಯಾಗಿದೆ. ಮೇಲ್ಚಾವಣಿ ಮೇಲೆ ಹರಡಿಕೊಂಡಿರುವ ಮರದ ಕೊಂಬೆಗಳನ್ನು ತೆರವುಗೊಳಿಸದೆ ಹೆಂಚುಗಳನ್ನು ಹಾಕಲಾಗುತ್ತಿದೆ. ಮಳೆಗಾಲದ ಶುರುವಾದರೆ ಮರದ ಕೊಂಬೆ ಎಲೆಗಳು ಉದುರಿ ಹೆಂಚುಗಳು ಹಾಳಾಗಲಿವೆ. ಹಳೆಯ ಕಟ್ಟಡದ ಹೊರ ಭಾಗಕ್ಕೆ ನೆಪ ಮಾತ್ರಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿದ್ದು ಕಿತ್ತು ಬರುತ್ತಿದೆ. ಆಸ್ಪತ್ರೆ ಹಿಂಭಾಗದ ಕಟ್ಟಡಕ್ಕೆ ಅಲ್ಲಿದ್ದ ಹಳೆಯ ಸೈಜುಗಳನ್ನು ಬಳಸಲಾಗಿದ್ದು ವೈದ್ಯರ ಸೂಚನೆ ಮೇರೆಗೆ ಅರ್ಧಕ್ಕೆ ಕೆಲಸ ಸ್ಥಗಿತಗೊಳಿಸಲಾಗಿದೆ.
ಹಳೆಯ ಶಿಥಿಲ ಗೋಡೆ ಮೇಲೆ ಮೆಲ್ಚಾವಣಿ ಹೊದಿಸಲಾಗುತ್ತಿದೆ. ಕಟ್ಟಡದ ಒಳಗೆ ಕೊಠಡಿಗಳು ಕಿಷ್ಕಿಂದೆಯಾಗಿದ್ದು ಕುಸಿದು ಬೀಳುವ ಅಪಾಯದಲ್ಲಿವೆ. ದುರಸ್ತಿ ಕಾಮಗಾರಿ ಸ್ಥಳಕ್ಕೆ ಇಂಜಿನಿಯರ್ ಕೂಡ ಭೇಟಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ಕಳಪೆಯಾದರೆ ಸಹಿಸುವುದಿಲ್ಲ. ಸರ್ಕಾರಿ ಅನುದಾನ ದುರುಪಯೋಗ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
0 Comments