ಅರಕಲಗೂಡು: ವಿಶ್ವದಲ್ಲೇ ಕರ್ನಾಟಕದಲ್ಲಿ ಕಲ್ಯಾಣ ಕ್ರಾಂತಿಗೆ ಕಾರಣಕರ್ತರಾಗಿ ಸಮ ಸಮಾಜ ಸ್ಥಾಪಿಸಲು ಅವಿರತ ಶ್ರಮಿಸಿದ ಕಾಯಕ ಯೋಗಿ ಬಸವಣ್ಣನವರ ಆದರ್ಶಗಳನ್ನು ಇಂದಿನ ಆಧುನಿಕ ಸಮಾಜದ ಜನರು ಮೈಗೂಡಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದು ದೊಡ್ಡ ಮಠಾಧೀಶ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,
ಸಮಾಜದಲ್ಲಿ ಜಾತಿಗಳ ನಡುವಿನ ಕಂದಕಗಳನ್ನು ಅಳಿಸಿ ಅಸಮಾನತೆ ತೊಡೆದು ಭಕ್ತಿ ಮಾರ್ಗದಲ್ಲಿ ಸಾಗಿದ ಬಸವಣ್ಣನವರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯಾಸತ್ಯತೆಯಿಂದ ಕೂಡಿವೆ. ಇವರ ಬದುಕಿನ ಮೌಲ್ಯಗಳು ಹಾಗೂ ಆದರ್ಶಗಳನ್ನು ಎಲ್ಲರೂ ಪಾಲಿಸಿದರೆ ಸಮಾಜದಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಿ ಲೋಕ ಕಲ್ಯಾಣವಾಗಲಿದೆ ಎಂದರು.
ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಮನೇಹಳ್ಳಿ ಮಠ ತಪೋವನ ಕ್ಷೇತ್ರದ ಶ್ರೀ ಮಹಂತ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆ ವಹಿಸಿ ಬಸವಣ್ಣನವರ ವಿಚಾರಧಾರೆ ಕುರಿತು ವಿವರಿಸಿದರು.
ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ತಾಪಂ ಇಒ ರವಿಕುಮಾರ್, ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್. ರವಿಕುಮಾರ್, ತಾಲೂಕು ರೈತ ಸಂಘ ಅಧ್ಯಕ್ಷ ಯೋಗಣ್ಣ, ಮಹದೇವ, ಗ್ರಾಮಸ್ಥರು ಇದ್ದರು.
ಜನಪದ ಕಲಾವಿದ ದೇವಾನಂದ ವರಪ್ರಸಾದ್ ಬಸವಣ್ಣನವರ ಕುರಿತು ಕಿರು ನಾಟಕ ಪ್ರದರ್ಶಿಸಿ ಹಾಡುಗಳನ್ನು ಹಾಡಿದರು. ಊರಿನ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು.
0 Comments