ಅರಕಲಗೂಡು: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅನುಯಾಯಿಯಾಗಿ ಕಾಲೇಜು ದಿನಗಳಿಂದಲೂ ಅವರ ಆದರ್ಶಗಳನ್ನು ಪಾಲಿಸಿರುವುದಾಗಿ ಮಾಜಿ ಸಚಿವ ಎ. ಮಂಜು ಹೇಳಿದರು.
ತಾಲೂಕಿನ ಅಜ್ಜೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ದಲಿತರ ಮನೆಯಲ್ಲಿ ವಾಸ್ತವ್ಯ ನಡೆಸಿ ಗುರುವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜು ದಿನಗಳಿಂದಲೂ ನಾನು ಅಂಬೇಡ್ಕರ್ ಅವರ ಅನುಯಾಯಿಯಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿದ್ದೇನೆ. ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡ ಕಾರಣಕ್ಕಾಗಿ ನಾನು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು.
ಅಲ್ಲದೇ ಕಾಲೇಜಿನಲ್ಲಿ ಶೇ. 60ರಷ್ಟು ದಲಿತ ಸಮುದಾಯದ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾದ ಒಡನಾಟ ಬೆಳೆಸಿಕೊಂಡ ಕಾರಣ ನಾನು ಸೆನೆಟ್ ಸದಸ್ಯನಾಗಿ ಆಯ್ಕೆಯಾಗಿದ್ದೆ. ನನ್ನ ರಾಜಕೀಯ ಏಳಿಗೆಗೂ ದಲಿತ ಸಮುದಾಯದ ಜನರ ಸಹಕಾರ ಅಪಾರವಾಗಿದೆ. ಜಾತೀಯತೆ ತೊಡೆದು ಎಲ್ಲರಿಗೂ ಸಮಾನ ಹಕ್ಕುಗಳನ್ನು ದೊರಕಿಸಿ ವಿಶ್ವವೇ ಮೆಚ್ಚುವ ಶ್ರೇಷ್ಠ ಸಂವಿಧಾನ ನೀಡಿದ ಮಹಾನ್ ನಾಯಕ ಅಂಬೇಡ್ಕರ್ ಮನಕುಲದ ಉದ್ದಾರಕ್ಕೆ ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಇವೆಲ್ಲ ಕಾರಣಕ್ಕಾಗಿ ಅಂಬೇಡ್ಕರ್ ಜಯಂತಿಯಂದು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಕಾಲನಿಯಲ್ಲಿ ಜಯಂತಿ ಆಚರಿಸಿದರೆ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಿ ಅವರ ಆದರ್ಶ ಪಾಲನೆಗೆ ಮಹತ್ವ ಬರುತ್ತದೆ. ಇದು ನನಗೆ ಮರೆಯಲಾಗದ ದಿನ ಎಂದು ತಿಳಿಸಿದರು.
ರಾಜಕೀಯವಾಗಿ ಜನರು ನೀಡಿದ ಅಧಿಕಾರದ ಋಣದಲ್ಲಿ ಶಕ್ತಿಮೀರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವೆ. ದಲಿತ ಕಾಲನಿಗಳ ಸಮಗ್ರ ಪ್ರಗತಿಗೆ ಪೂರಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ತೃಪ್ತಿ ಇದೆ. ನಾನು ಯಾವ ಪಕ್ಷದಲ್ಲಿದ್ದೇನೆ ಎನ್ನುವುದು ಮುಖ್ಯವಲ್ಲ. ಕ್ಷೇತ್ರದ ಜನ ಕೈಹಿಡಿದರೆ ನಿಮ್ಮ ಸೇವಕನಾಗಿರುವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ನಂತರ ಗ್ರಾಮದ ದಲಿತರ ಕಾಲನಿಯಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಮಂಗಳ ವಾದ್ಯ ಮೂಲಕ ಎ. ಮಂಜು ಅವರನ್ನು ಮೆರೆವಣಿಗೆಯಲ್ಲಿ ಬರಮಾಡಿಕೊಂಡರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡರು.
- ರವಿ
0 Comments