ಅರಕಲಗೂಡು: ಪ್ರಬುದ್ಧ ಭಾರತದ ಕನಸು ನನಸಗೊಳಿಸಲು ಶ್ರಮಿಸಿದ ವಿಶ್ವಜ್ಞಾನಿ ಡಾ. ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಅವರ ಆಶಯಗಳೆಲ್ಲವೂ ಈಡೇರಿವೆಯೇ ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳವ ಅಗತ್ಯತೆ ಎದುರಾಗಿದೆ ಎಂದು ಹಾಸನ ಆಕಾಶವಾಣಿಯ ಪ್ರಸಾರ ನಿರ್ವಹಣಾಧಿಕಾರಿ ವಿ. ಮಧುಸೂಧನ್ ಪ್ರತಿಪಾದಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಗುರುವಾರ ತಾಲೂಕು ಆಡಳಿತ, ಪಪಂ, ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ 131ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೇಶದಲ್ಲಿ ಬಹುಸಂಖ್ಯಾತರಾಗಿದ್ದ ದಲಿತರ ಸಮಸ್ಯೆಗಳು ಬಗೆಹರಿಸಿದರಷ್ಟೆ ಪ್ರಬುದ್ಧ ಭಾರತ ಕಟ್ಟಲು ಸಾಧ್ಯವೆನ್ನುವುದನ್ನು ಮನಗಂಡು ಈ ನಿಟ್ಟಿನಲ್ಲಿ ಶ್ರಮಿಸಿದ ಅಂಬೇಡ್ಕರ್ ಅವರನ್ನು ಕೇವಲ ಮೀಸಲಾತಿಗಷ್ಟೆ ನೆನಪಿಸಿಕೊಳ್ಳುವುದು ಸರಿಯಲ್ಲ. ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆಯ ಅಗತ್ಯವಿದೆ ಎಂದರು.
ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಸಂವಿಧಾನ ರಚನಾ ಸಮಿತಿ ಆಧ್ಯಕ್ಷರಾಗಿ ವಿಶ್ವವೆ ಮೆಚ್ಚುವಂತಹ ಸಂವಿಧಾನವನ್ನು ನೀಡಿದ ಹೆಗ್ಗಳಿಕೆ ಅಂಬೇಡ್ಕರ್ ಅವರದು. ಇತ್ತೀಚಿನ ದಿನಗಳಲ್ಲಿ ಜನರನ್ನು ದಿಕ್ಕು ತಪ್ಪಿಸುವಂತಹ ಪ್ರಯತ್ನಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದು ಇದರ ವಿರುದ್ದ ಜಾಗೃತರಾಗಿ ಸಂವಿಧಾನದ ಆಶಯಗಳನ್ನು ಕಾಪಾಡುವ ಹೊಣೆ ನಮ್ಮೆಲ್ಲರ ಮೇಲಿದೆ. 2018 ರಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟ ಪ್ರಕರಣ ಇನ್ನೂ ಮಾಸಿಲ್ಲ. ಇಂತಹ ಕಿಡಿಗೇಡಿ ಕೃತ್ಯಗಳನ್ನು ಗಟ್ಟಿಧ್ವನಿಯಲ್ಲಿ ಖಂಡಿಸಬೇಕು. ಸಂವಿಧಾನದ ಪ್ರತಿ ಸುಡಬಹುದು ಆದರೆ ಅದರ ಸಿದ್ದಾಂತಗಳನ್ನು ಸುಡಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ 24 ಮಮದಿ ಅಂಗವಿಕಲರಿಗೆ ತ್ರಿ ಚಕ್ರವಾಹನ, ಆತ್ಮಹತ್ಯೆ ಮಾಡಿಕೊಂಡ 7 ರೈತ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಧನದ ಚೆಕ್ ಹಾಗೂ 92 ಜನರಿಗೆ ವಿವಿಧ ಪಿಂಚಿಣಿ ಯೋಜನೆ ಮಂಜೂರಾತಿ ಪತ್ರ, ಅಂಬೇಡ್ಕರ್ ನಿಗಮದಿಂದ ನೇರ ಸಾಲ ಯೋಜನೆಯಡಿ 8 ಜನರಿಗೆ ತಲಾ ರೂ 50 ಸಾವಿರದ ಸಾಲ ಮಂಜೂರಾತಿ ಆದೇಶಪತ್ರ, ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ತಲಾ ರೂ 2.5 ಲಕ್ಷ ಸಹಾಯಧನ, ಕಾರ್ಮಿಕ ಇಲಾಖೆ ಮೂಲಕ 140 ಜನರಿಗೆ ಸಲಕರೆಣೆಗಳ ಕಿಟ್ ವಿತರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರು ಹಾಗೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಜನಪದ ಕಲಾವಿದ ದೇವಾನಂದ ವರಪ್ರಸಾದ್ ಅವರು ಅಂಬೇಡ್ಕರ್ ಅವರ ಕುರಿತು ಗೀತೆಗಳನ್ನು ಹಾಡಿ ಗಮನ ಸೆಳೆದರು.
ತಹಸೀಲ್ದಾರ್ ಕೆ.ಆರ್ ಶ್ರೀನಿವಾಸ್ ಮಾತನಾಡಿದರು. ಪಪಂ ಅಧ್ಯಕ್ಷ ಅಬ್ದುಲ್ ಬಾಸಿತ್, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ಸದಸ್ಯರಾದ ಪ್ರದೀಪ್ ಕುಮಾರ್, ಅನಿಕೇತನ್, ಸುಬಾನ್ ಷರೀಪ್, ಮುಖ್ಯಾಧಿಕಾರಿ ಶಿವಕುಮಾರ್, ವಕೀಲ ಬಿ.ಸಿ. ರಾಜೇಶ್, ಶಂಕರಯ್ಯ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಅತ್ನಿ ಹರೀಶ್, ಮುಖಂಡರಾದ ಲೋಕನಾಥ್, ಗಣೇಶ್ ವೇಲಾಪುರಿ, ತಾಪಂ ಇಒ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪಿ.ಎಚ್ ಲಿಂಗರಾಜ್, ಬಿಇಒ ಬಾಲರಾಜ್, ಪಶು ವೈದ್ಯಾಧಿಕಾರಿ ಡಾ. ಚೇತನ್ ಇದ್ದರು. ಕಾರ್ಯಕ್ರಮಕ್ಕೆ ಮುನ್ನ ಜಾನಪದ ಕಲಾ ತಂಡಗಳೊಂದಿಗೆ ಅಂಬೇಡ್ಕರ್ ಭಾವ ಚಿತ್ರದ ವೈಭವೋಪೇತ ಮೆರವಣಿಗೆ ನಡೆಸಲಾಯಿತು.
0 Comments