ಅರಕಲಗೂಡು: ಎಲ್ಲರೂ ಶಿಕ್ಷಣ ಪಡೆದು ಸಮಾನ ಹಕ್ಕುಗಳನ್ನು ಗಳಿಸುವ ಮೂಲಕ ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಶ್ರಮಿಸಬೇಕು ಎಂದು ಸಮಾಜ ಸೇವಕ ಎಂ.ಟಿ. ಕೃಷ್ಣೇಗೌಡ ಹೇಳಿದರು.
ಪಟ್ಟಣದ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಕೃಷ್ಣೇಗೌಡ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ 131ನೇ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೋಷಿತರು, ಬಡ ವರ್ಗದವರ ಧ್ವನಿಯಾಗಿದ್ದ ಅಂಬೇಡ್ಕರ್ ವಿಶ್ವಕ್ಕೆ ಮಾದರಿಯಾದ ಶ್ರೇಷ್ಠ ಸಂವಿಧಾನ ರಚಿಸಿ ಎಲ್ಲ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ.
ಅಂಬೇಡ್ಕರ್ ಚಿಂತನೆಗಳಿಂದ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗಿದ್ದು ಸಾಮಾಜಿಕ ಹಾಗೂ ರಾಜಕೀಯ ಸ್ಥಾನ ಗಳಿಸಿ ಹಕ್ಕುಗಳನ್ನು ಹೊಂದಲು ಸಹಕಾರಿಯಾಗಿದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಸೇವಕರನ್ನು ರಾಜಕೀಯವಾಗಿ ಮೇಲೆತ್ತುವ ಕೆಲಸವೂ ಆಗಬೇಕಿದೆ. ಆಗ ಮಾತ್ರ ಎಲ್ಲ ಕ್ಷೇತ್ರಗಳಲ್ಲೂ ಸರ್ವಾಂಗೀಣ ಅಭಿವೃದ್ಧಿ ಕಾಣಬಹುದು ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಸಂತೋಷ್ ಶಣವಿನಕುಪ್ಪೆ, ಮುಖಂಡರಾದ ಗಣೇಶ್ ವೇಲಾಪುರಿ, ಕಟ್ಟೇಪುರ ಕೃಷ್ಣೇಗೌಡ, ಪೃಥ್ವಿರಾಜ್, ಜಮೀರ್, ಪಪಂ ಸದಸ್ಯರಾದ ಸುಬಾನ ಷರೀಫ್, ಅನಿಕೇತನ್ ಇತರರಿದ್ದರು.
ನಂತರ ಮೆರವಣಿಗೆಯಲ್ಲಿ ತೆರಳಿ ತಾಲೂಕು ಕಚೇರಿ ಠವರದಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಲಾಯಿತು.
ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ರವೀಂದ್ರ ಕುಮಾರ್ ಅವರು ಅಂಬೇಡ್ಕರ್ ವ್ಯಕ್ತಿ ವಿಕಸ ಪುಸ್ತಕಗಳನ್ನು ವಿತರಿಸಿದರು.
0 Comments