ಅರಕಲಗೂಡು: ಇಂದು ದಲಿತರ ಐಕ್ಯತಾ ಸಮಾವೇಶ, ಶಕ್ತಿ ಪ್ರದರ್ಶನಕ್ಕೆ ಸಜ್ಜು

ಅರಕಲಗೂಡು:  ದಲಿತ ಸಮುದಾಯದ ಮುಖಂಡರ ಒಗ್ಗಟ್ಟಿನ ಪ್ರತೀಕವಾಗಿ ಇಂದು ನಡೆಯುವ ಅಂಬೇಡ್ಕರ್ ಜಯಂತಿ ಹಬ್ಬ ಹಾಗೂ ದಲಿತರ ಐಕ್ಯತಾ ಸಮಾವೇಶಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ.

ಇದೇ ಮೊದಲ ಬಾರಿಗೆ ಐತಿಹಾಸಿಕವಾಗಿ ತೀರ್ಮಾನ ತೆಗೆದುಕೊಂಡು ತಾಲೂಕಿನ ಪ್ರಬಲ ಸಮುದಾಯವಾದ ದಲಿತರಲ್ಲಿ ಐಕ್ಯತೆ ಮೂಡಿಸಲು ಮುಖಂಡರು ಒಗ್ಗೂಡಿ ಪ್ರತಿ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸಮಾವೇಶಕ್ಕೆ ಜನ ಸಂಘಟಿಸಿದ್ದು ಹಲವು ನಿರೀಕ್ಣೆಗಳ ನಡುವೆ ಭಾರಿ ಮಹತ್ವ ಪಡೆದುಕೊಂಡಿದೆ.

ಬೇರೆ ಸಮುದಾಯದ ರಾಜಕೀಯ ನಾಯಕರ ಆಶ್ರಯವಿಲ್ಲದೆ ಸ್ವಾಭಿಮಾನ ಪ್ರದರ್ಶನಕ್ಕೆ ಮುಂದಾಗಿ ದಲಿತ ಸಮುದಾಯದ ಮುಖಂಡರೇ ಸಂಪನ್ಮೂಲವನ್ನೂ ಕ್ರೋಡಿಕರಿಸಿದ್ದಾರೆ.

ಸಂವಿಧಾನ ಶಿಲ್ಪಿ  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131 ನೇ ಜನ್ಮ ದಿನದ  ಅಂಗವಾಗಿ ಏ.೩೦ರ ಶನಿವಾರ ಸಂವಿಧಾನ ಸಂರಕ್ಷಣೆಗಾಗಿ ದಲಿತರ ಐಕ್ಯತಾ ಸಮಾವೇಶ ಹಾಗೂ ಅಂಬೇಡ್ಕರ್ ಹಬ್ಬವನ್ನು ಆಚರಿಸಲಾಗುತ್ತಿದೆ. ಪಕ್ಷಾತೀತವಾಗಿ ತಾಲ್ಲೂಕಿನಲ್ಲಿರುವ  ಎಲ್ಲ ದಲಿತ ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಒಟ್ಟಾಗಿ  ಕಾರ್ಯಕ್ರಮವನ್ನು ಆಯೋಜಿಸಿದ್ದು ಒಡೆದ ದಲಿತ ಮನಸ್ಸುಗಳನ್ನು ಒಗ್ಗೂಡಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಅಂತೆಯೇ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ,  ತಾಲ್ಲೂಕಿನ ಪ್ರತಿ ಹಳ್ಳಿಗಳಿಂದ ಜನರು ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮಕ್ಕೆ ಬರುತ್ತಿದ್ದು  10 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದೊಂದು ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ.
 
ಬೀದರ್ ನ ವರಜ್ಯೋತಿ ಬಂತೇಜಿ,  ಟಿ. ನರಸೀಪುರ ನಳಂದ ಬೌದ್ಧ ವಿಹಾರದ ಬೋದಿರತ್ನ ಬಂತೇಜಿ, ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ  ಸ್ವಾಮೀಜಿ ಸಾನಿಧ್ಯ ವಹಿಸುವರು,   ಅಗ್ನಿಶಾಮಕ ಹಾಗೂ ಗೃಹ  ಇಲಾಖೆ ಅಧಿಕಾರಿ ಎಂ. ನಂಜುಂಡಸ್ವಾಮಿ ಕಾರ್ಯಕ್ರಮವನ್ನು   ಉದ್ಘಾಟಿಸುವರು. ಚಿತ್ರ ನಟ ಪ್ರೇಮ್  ಅಂಬೇಡ್ಕರ್ ಭಾವ ಚಿತ್ರ ಅನಾವರಣ ಮಾಡುವರು. ಐಎಎಸ್ ಅಧಿಕಾರಿ ಕೆ.ಎಂ.ಜಾನಕಿ  ಅಧ್ಯಕ್ಷತೆ ವಹಿಸಲಿದ್ದು ಹಿಂದುಳಿದ ವರ್ಗಗಳ  ಆಯೋಗದ ಮಾಜಿ  ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್, ಸಮುದಾಯ ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿ ಕೆ.ಎಸ್.ವಿಮಲ,  ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಗುರು ಪ್ರಸಾದ್ ಕೆರಗೋಡು,ಸಮಾಜ ಸೇವಕಿ ನಜ್ಮಾ ನಸೀರ್, ಕರ್ನಾಟಕ ಕ್ರೈಸ್ತ ಸಂಘಟನೆಯ ಸ್ಟ್ಯಾನಿ ಪಿಂಟೊ ಪಾಲ್ಗೊಳ್ಳಲಿದ್ದಾರೆ.

Post a Comment

0 Comments